ಶ್ಲೋಕ – 17
ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ ಸದಾ ಪರಿಚಿಂತಯನ್ ।
ಕೇಷು ಕೇಷು ಚ ಭಾವೇಷು ಚಿಂತ್ಯೋSಸಿ ಭಗವನ್ ಮಯಾ ॥೧೭॥
ಸರ್ವಸಮರ್ಥನೆ, ನಿನ್ನನ್ನು ಅನುಗಾಲ ಪರಿಪರಿ ನೆನೆಯುತ್ತ ನಾನು ಹೇಗೆ ತಿಳಿದೇನು?
ಓ ಭಗವನ್, ಯಾವಯಾವ ವಸ್ತುಗಳಲ್ಲಿ ಹೇಗಿರುವೆಯೆಂದು ನಾನು ನೆನೆಯಬೇಕು?
ಈ ಪ್ರಪಂಚದ ಪ್ರತಿಯೊಂದು ವಸ್ತುವಿನಲ್ಲಿರುವ ಒಂದು ವಿಶಿಷ್ಟ ಗುಣದ ಹಿಂದೆ ಭಗವಂತನ ವಿಭೂತಿ ಅಡಗಿದೆ.
ಇಲ್ಲಿ ಅರ್ಜುನ ಭಗವಂತನಲ್ಲಿ ಪ್ರಾರ್ಥಿಸುತ್ತಾನೆ: “ಸರ್ವ ಸಮರ್ಥನಾದ ನೀನು ಎಲ್ಲಿ ಏನಾಗಿದ್ದಿ ಎಂದು ನಿನಗೆ ಗೊತ್ತಿದೆ ಹೊರತು ನನಗಲ್ಲ.
ನಾನು ಒಂದು ವಸ್ತುವನ್ನು ಕಂಡಾಗ ಅದರ ಹಿಂದಿರುವ ಭಗವತ್ ಶಕ್ತಿಯ ನೆನಪು ನನಗೆ ಬರಬೇಕು.
ಯಾವಯಾವ ವಸ್ತುವಿನಲ್ಲಿ ನಿನ್ನ ಉಪಾಸನೆಯನ್ನು ನಾನು ಮಾಡಬೇಕು-ಅದನ್ನು ನಾನು ತಿಳಿಯಬೇಕು” ಎಂದು.
