ರಾಮನಾಥಪುರ: ಅರಕಲಗೂಡು ತಾಲೂಕಿನ ವಿ.ಜಿ.ಕೊಪ್ಪಲು, ನಂದಿಗೌಡನಕೊಪ್ಪಲು ಹಾಗೂ ಅತ್ತಿಮರದಕೊಪ್ಪಲು ಗ್ರಾಮಗಳಲ್ಲಿ ಮೇ 8ರಂದು ನಡೆಯಲಿರುವ ಶ್ರೀ ಭಗೀರತ ಮಹರ್ಷಿ ಜಯಂತಿ ಹಾಗೂ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ಅಂಗವಾಗಿ ಪರಮಪೂಜ್ಯ ಡಾ. ಶ್ರೀ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಯವರ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ.
ಮೇ 8ರ ಶುಕ್ರವಾರ ಬೆಳಿಗ್ಗೆ, ವಿ.ಜಿ.ಕೊಪ್ಪಲು ಗ್ರಾಮದಿಂದ ಆರಂಭವಾಗುವ ಮೆರವಣಿಗೆ ನಂದಿಗೌಡನಕೊಪ್ಪಲು ಮೂಲಕ ಅತ್ತಿಮರದಕೊಪ್ಪಲು ಗ್ರಾಮಕ್ಕೆ ಸಾಗಲಿದೆ. ಪೂರ್ಣ ಕುಂಭ ಕಳಸಗಳೊಂದಿಗೆ ವೀರಗಾಸೆ, ಕೀಲುಕುದುರೆ, ಡೊಳ್ಳುಕುಣಿತ, ಮಂಗಳವಾದ್ಯಗಳು ಹಾಗೂ ಡಿಜೆ ಸೌಂಡ್ಸ್ ವೈಭವದೊಂದಿಗೆ ಮಹಾಸ್ವಾಮೀಜಿಯವರ ಪುರ ಪ್ರವೇಶವನ್ನು ಅದ್ದೂರಿಯಾಗಿ ನಡೆಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದೇ ದಿನ ಬೆಳಿಗ್ಗೆ 9 ಗಂಟೆಗೆ ಅರಕಲಗೂಡು ತಾಲೂಕು ಮಟ್ಟದ ಶ್ರೀ ಭಗೀರತ ಮಹರ್ಷಿ ಜಯಂತಿ ಹಾಗೂ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ. ಬಳಿಕ ಬೆಳಿಗ್ಗೆ 10.30ಕ್ಕೆ ಧಾರ್ಮಿಕ ಸಭೆ ಆಯೋಜಿಸಲಾಗಿದೆ.
ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯಸಿಂಹಾಸನ ಭಗೀರಥ ಗುರುಪೀಠ, ಬ್ರಹ್ಮವಿದ್ಯಾನಗರ ಮದುರೆ ಹೊಸದುರ್ಗದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಹಾಗೂ ಚಾಮರಾಜನಗರ ಕ್ಷೇತ್ರದ ಶಾಸಕರಾದ ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಲಕ್ಷ್ಮಣ ಉಪ್ಪಾರ್ ಗೌರವ ಉಪಸ್ಥಿತಿ ವಹಿಸಲಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಹಾಗೂ ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಸದಸ್ಯ ಎ.ಜಿ. ನಾಗರಾಜು ಅವರು ಶ್ರೀ ಭಗೀರತ ಮಹರ್ಷಿಗಳ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ಗ್ರಾಮಸ್ಥರು ಹಾಗೂ ಸಂಘಟಕರು ಮನವಿ ಮಾಡಿದ್ದಾರೆ.
-ಕುಮಾರಸ್ವಾಮಿ ಎಂ.ಎನ್
