ಬೆಂಗಳೂರು: ‘ಸರ್ಕಾರಿ ಉದ್ಯೋಗಿ’ ಎಂಬ ಕಾರಣಕ್ಕೆ ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ ಅತ್ಯಾಚಾರ ಆರೋಪದಡಿ ಜೈಲಿನಲ್ಲಿರುವ ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಸಹಾಯಕ ಕಾರ್ಯಕಾರಿ ಅಭಿಯಂತರ ಎಚ್.ಎನ್. ಶ್ರೀನಿವಾಸಮೂರ್ತಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ನ್ಯಾಯಪೀಠದ ಅಭಿಪ್ರಾಯದಂತೆ, ಆರೋಪಿ ವಿರುದ್ಧ ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪವಿದೆ. CrPC ಕಲಂ 164ರ ಅಡಿ ಸಂತ್ರಸ್ತೆಯ ಹೇಳಿಕೆ ಹಾಗೂ ವೈದ್ಯಕೀಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಾಗ ಆರೋಪಿ ಅತ್ಯಾಚಾರ ಎಸಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಈ ವಿಷಯವನ್ನು ಯಾರಿಗೂ ಹೇಳದಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ ಆರೋಪವೂ ಇದೆ ಎಂದು ನ್ಯಾಯಪೀಠ ಗಮನಿಸಿದೆ.
ಆರೋಪಿತನು ಸರ್ಕಾರಿ ಉದ್ಯೋಗಿಯಾಗಿರುವುದರಿಂದ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಯ ಪರ ವಕೀಲರು ವಾದಿಸಿದ್ದರು. ಸಂತ್ರಸ್ತೆ ನೀಡಿದ ದೂರಿನಲ್ಲಿ ಸತ್ಯಾಂಶವಿಲ್ಲ ಹಾಗೂ ಘಟನೆ ನಡೆದ ಬಳಿಕ ಒಂದೂವರೆ ತಿಂಗಳ ನಂತರ ದೂರು ನೀಡಲಾಗಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಅರ್ಜಿದಾರನಿಗೆ ಕೇವಲ 25 ವರ್ಷ ವಯಸ್ಸಿದ್ದು, ಆತನ ಉದ್ಯೋಗ ಹಾಗೂ ಭವಿಷ್ಯವನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್, ಆರೋಪಿಯ ಜಾಮೀನು ಮನವಿಯನ್ನು ತಿರಸ್ಕರಿಸುವಂತೆ ನ್ಯಾಯಾಲಯವನ್ನು ಕೋರಿತ್ತು.
ಘಟನೆಯ ವಿವರ
ಸಂತ್ರಸ್ತೆಯ ದೂರಿನ ಪ್ರಕಾರ, 2021ರ ಸೆಪ್ಟೆಂಬರ್ 14ರಂದು ಆರೋಪಿ ಶ್ರೀನಿವಾಸಮೂರ್ತಿ ತನ್ನನ್ನು ಹೋಮ್ಸ್ಟೇಗೆ ಕರೆದುಕೊಂಡು ಹೋಗಿ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಹೊಂದಿದ್ದಾನೆ. ತಾನು ಈಗಾಗಲೇ ನಿಶ್ಚಿತಾರ್ಥಗೊಂಡಿದ್ದೇನೆ ಎಂದು ಹೇಳಿದರೂ ಬಲವಂತವಾಗಿ ಸಂಭೋಗ ನಡೆಸಿದ ಎಂದು ಆರೋಪಿಸಲಾಗಿದೆ.
ನಂತರ ಮದುವೆಯಾಗುವುದಾಗಿ ಭರವಸೆ ನೀಡಿ ಪುಸಲಾಯಿಸಿ, ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಈ ಸಂಬಂಧ 2021ರ ನವೆಂಬರ್ 3ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಲಾಗಿತ್ತು. ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376, 420 ಮತ್ತು 506 ಅಡಿ ಎಫ್ಐಆರ್ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮೊದಲು ತಿರಸ್ಕರಿಸಿತ್ತು. ನಂತರ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದರೂ, ಹೈಕೋರ್ಟ್ ಕೂಡ ಜಾಮೀನು ನೀಡಲು ನಿರಾಕರಿಸಿದೆ.
