ಬೆಂಗಳೂರು: ರಾಜ್ಯದ 76 ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆ ಹಾಗೂ 41 ಉರ್ದು ಮಾಧ್ಯಮ ಶಾಲೆ ಸೇರಿ ಒಟ್ಟು 117 ಶಾಲೆಗಳನ್ನು ₹683.33 ಕೋಟಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
2025-26ನೇ ಸಾಲಿನ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯಿಂದ ಕೆಪಿಎಸ್ ಮಾದರಿಗೆ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಉರ್ದು ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ಸರಕಾರ ಪ್ರಸ್ತಾಪಿಸಿತ್ತು. ಇದರಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೌಲಾನಾ ಆಜಾದ್ ಹಾಗೂ ಉರ್ದು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಮೈಸೂರು ಷುಗರ್ಗೆ ಟಿಡಿಸಿ ಯಂತ್ರ
ಇದೇ ವೇಳೆ ದಿ ಮೈಸೂರು ಷುಗರ್ ಕಂಪನಿಯ ಬಾಯ್ಲಿಂಗ್ ಹೌಸ್ ದುರಸ್ತಿ ಮತ್ತು ದಿನಕ್ಕೆ 5,000 ಟನ್ ಕಬ್ಬು ನುರಿಯುವ (ಟಿಡಿಸಿ) ಸಾಮರ್ಥದ ಹೊಸ ಯಂತ್ರೋಪಕರಣ ಅಳವಡಿಸಲು ₹60 ಕೋಟಿ ಅಂದಾಜು ವೆಚ್ಚದ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಮಂಡ್ಯದ ನಾಲೆಗೆ 100 ಕೋಟಿ ರು.
ಜಲಸಂಪನ್ಮೂಲ ಇಲಾಖೆಯಿಂದ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾವೇರಿ ಶಾಖಾ ನಾಲೆ, ಕೆರಗೋಡು ಶಾಖಾ ನಾಲೆ, ಶಿಂಷಾ ಶಾಖಾ ನಾಲೆ ಮತ್ತು ಹೊಸ ಮದ್ದೂರು ಶಾಖಾ ನಾಲೆಗಳಡಿಯಲ್ಲಿನ ವಿತರಣಾ ನಾಲೆ ಹಾಗೂ ಪಿಕಪ್ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ₹100 ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಂಪುಟ ತೀರ್ಮಾನಿಸಿದೆ.
