ರಾಮನಾಥಪುರ: ಪಟ್ಟಣದ ಕಾವೇರಿ ನದಿ ದಂಡೆಯಲ್ಲಿರುವ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಾಲಯಕ್ಕೆ ರಾಜಸ್ಥಾನದ ಜೋಧ್ಪುರದಿಂದ ಆಗಮಿಸಿದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪುರಾತನ ರಥ ಭಕ್ತರ ಭಕ್ತಿ, ಸಂಭ್ರಮದ ನಡುವೆ ವಿಶೇಷವಾಗಿ ಸ್ವಾಗತಿಸಲ್ಪಟ್ಟಿತು.
ರಾಜಸ್ಥಾನದ ಜೋಧ್ಪುರದಿಂದ ಹೊರಟ ಈ ಪವಿತ್ರ ರಥವು ಮೈಸೂರು, ಪಿರಿಯಪಟ್ಟಣ, ಬೆಟ್ಟದಪುರ ಮಾರ್ಗವಾಗಿ ರಾಮನಾಥಪುರಕ್ಕೆ ಆಗಮಿಸಿತು. ಸುಮಾರು 600 ವರ್ಷಗಳ ಹಿಂದಿನ ಐತಿಹಾಸಿಕ ರಥದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೂರ್ತಿ ಆಗಮಿಸಿರುವುದು ಭಕ್ತರಲ್ಲಿ ವಿಶೇಷ ಭಾವಭಕ್ತಿಯನ್ನು ಮೂಡಿಸಿತು.
ರಾಮನಾಥಪುರದ ಕಾವೇರಿ ನದಿ ತೀರದಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಮುಂಭಾಗಕ್ಕೆ ರಥ ಆಗಮಿಸಿದ ವೇಳೆ, ಭಕ್ತರು ಪೂಜೆ, ಆರತಿ ಹಾಗೂ ಜಯಘೋಷಗಳೊಂದಿಗೆ ದೇವಿಯನ್ನು ಬರಮಾಡಿಕೊಂಡರು.
ಸುಮಾರು 6 ವರ್ಷಗಳ ಹಿಂದೆ ಎತ್ತಿನಗಾಡಿ ಮಾದರಿಯ ರಥದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ವಿಶೇಷ ಪೂಜೆಯಲ್ಲಿ ರಾಮನಾಥಪುರ, ಕೊಣನೂರು, ಬಸವಪಟ್ಟಣದ ಕೆ.ಆರ್.ಬಿ. ಸೀರವಿ ಸಮಾಜದ ಭಕ್ತರು ಭಾಗವಹಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮ ಭಕ್ತರ ಗಮನ ಸೆಳೆಯಿತು.
– ಕುಮಾರಸ್ವಾಮಿ
