ಕೊರಟಗೆರೆ, ಮಾ.13: ಸಮೃದ್ಧ ಕರ್ನಾಟಕದ ನಿರ್ಮಾಣಕ್ಕಾಗಿ ಜೆಡಿಎಸ್ ಕಾರ್ಯಕರ್ತರ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಏಜೆಂಟರ (ಬಿಎಲ್ಎ) ಕಾರ್ಯಾಗಾರ ಹಾಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ತಾಲ್ಲೂಕಿನ ಸಾದರ ಭವನದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು ಜೆಡಿಎಸ್ ವತಿಯಿಂದ ಆಯೋಜಿಸಲಾಗಿದ್ದು, ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತಾಗಿ ಬೂತ್ ಮಟ್ಟದ ಏಜೆಂಟರನ್ನು ಆಯ್ಕೆ ಮಾಡಿ, ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವುದು ಹಾಗೂ ಮತದಾರರಿಗೆ ನೆರವಾಗುವ ಉದ್ದೇಶ ಹೊಂದಿತ್ತು.

ಕಾರ್ಯಕ್ರಮವನ್ನು ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
“ಎಲ್ಲರನ್ನು ಒಗ್ಗೂಡಿಸಿ ಪಕ್ಷವನ್ನು ಸಂಘಟಿಸಬೇಕು. ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ, ಅರ್ಹ ಮತದಾರರನ್ನು ಗುರುತಿಸಿ, ನೇರವಾಗಿ ಅರ್ಜಿಗಳನ್ನು ಪಡೆದು ಪರಿಷ್ಕರಣೆ ಮಾಡಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಬಿಎಲ್ಎಗಳು ನಿರಂತರ ಪರಿಶ್ರಮದಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಕೈಗೊಂಡು, ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇಂದಿನಿಂದಲೇ ಕ್ರಿಯಾಶೀಲರಾಗಬೇಕು” ಎಂದು ಅವರು ಸಲಹೆ ನೀಡಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಮರಾಜಣ್ಣ ಮಾತನಾಡಿ, “ಪ್ರತಿಯೊಬ್ಬ ಬಿಎಲ್ಎ ಏಜೆಂಟ್ ಮತದಾರರ ಪರಿಷ್ಕರಣೆ, ಮತದಾರರ ಪಟ್ಟಿಯ ತಿದ್ದುಪಡಿ ಹಾಗೂ ಹೊಸ ಮತದಾರರನ್ನು ಸೇರಿಸುವ ಕಾರ್ಯದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಒಂದೊಂದು ಮತವೂ ಅತ್ಯಂತ ಮಹತ್ವದ್ದಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡ್ರೈವರ್ ಸಿದ್ದಣ್ಣ, ಎಲ್.ವಿ. ಪ್ರಕಾಶ್, ರೇಣುಕ ಪ್ರಸಾದ್, ಓಬಳಪ್ಪ, ಪ್ರಹ್ಲಾದ್, ರಾಜು ಗೊಲ್ಲಹಳ್ಳಿ ಸೇರಿದಂತೆ ವಿಧಾನಸಭಾ ಕ್ಷೇತ್ರದ ಆರು ಹೋಬಳಿಗಳ ಜೆಡಿಎಸ್ ಸದಸ್ಯರು ಭಾಗವಹಿಸಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
