ನವದೆಹಲಿ, ಮಾ.11: ಕಾಫಿ ಬೆಳೆಗಾರರ ತೋಟಗಳನ್ನು ಸರ್ಫಾಸಿ ಕಾಯ್ದೆಯಡಿ ಆನ್ಲೈನ್ ಹರಾಜು ಮಾಡುತ್ತಿರುವ ಬ್ಯಾಂಕ್ಗಳ ಕ್ರಮ ತಡೆಗಟ್ಟುವಂತೆ ಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ಹಾಗೂ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮಾ.11ರಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ನಿಯೋಗ, ಕಾಫಿ ಬೆಳೆಗಾರರ ಕೃಷಿ ಸಾಲಗಳನ್ನು ವಾಣಿಜ್ಯ ಸಾಲಗಳ ಮಾದರಿಯಲ್ಲಿ ಪರಿಗಣಿಸಿ, ಸರ್ಫಾಸಿ ಕಾಯ್ದೆ ಅಡಿಯಲ್ಲಿ ತೋಟಗಳನ್ನು ಇ-ಆಕ್ಷನ್ಗೆ ಇಡುವ ಕ್ರಮದಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿರುವ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟಿತು.
ಈ ವೇಳೆ ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿ, ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಈ ನಿಯೋಗದಲ್ಲಿ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಡಾ. ಸಿ.ಎನ್. ಮಂಜುನಾಥ್ ಅವರು ಭಾಗವಹಿಸಿದ್ದರು.
ಬ್ಯಾಂಕ್ಗಳ ಇ-ಆಕ್ಷನ್ ನೋಟಿಸ್ಗಳ ವಿರುದ್ಧ ಆಕ್ರೋಶ
ಈ ಹಿಂದೆ ಕೇಂದ್ರ ಸಚಿವರು ಆನ್ಲೈನ್ ಹರಾಜು ಪ್ರಕ್ರಿಯೆ ತಡೆಹಿಡಿಯುವಂತೆ ಸೂಚನೆ ನೀಡಿದ್ದರೂ, ಬ್ಯಾಂಕ್ಗಳು ಆ ಸೂಚನೆಯನ್ನು ಲೆಕ್ಕಿಸದೇ ಕಾಫಿ ಬೆಳೆಗಾರರಿಗೆ ಇ-ಆಕ್ಷನ್ ನೋಟಿಸ್ಗಳು ಜಾರಿ ಮಾಡುತ್ತಿರುವ ಬಗ್ಗೆ ನಿಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಕಾಫಿ ಬೆಳೆಗಾರರು ಕೃಷಿ ಸಾಲದ ವ್ಯಾಪ್ತಿಯಲ್ಲಿ ಪಡೆದಿರುವ ಸಾಲಗಳನ್ನು ವಾಣಿಜ್ಯ ಸಾಲಗಳ ವಸೂಲಾತಿ ಕ್ರಮದಂತೆ ಪರಿಗಣಿಸಿ, ಸರ್ಫಾಸಿ ಕಾಯ್ದೆ ಬಳಸಿ ತೋಟಗಳನ್ನು ಹರಾಜು ಹಾಕುತ್ತಿರುವ ಬ್ಯಾಂಕ್ಗಳ ನಿಲುವು ನ್ಯಾಯಸಮ್ಮತವಲ್ಲ ಎಂದು ತಿಳಿಸಲಾಯಿತು.
ಮಾರುಕಟ್ಟೆ ಮೌಲ್ಯ ಕಡೆಗಣನೆ ಆರೋಪ
ಬೆಳೆಗಾರರ ತೋಟಗಳನ್ನು ಹರಾಜು ಮಾಡುವ ವೇಳೆ ಬ್ಯಾಂಕ್ಗಳು ತೋಟಗಳ ನೈಜ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸದೇ, ತಮ್ಮ ಸಾಲದ ಬಾಕಿ ಮೊತ್ತವನ್ನು ಮಾತ್ರ ಗಮನದಲ್ಲಿಟ್ಟು ಹರಾಜು ಪ್ರಕ್ರಿಯೆ ನಡೆಸುತ್ತಿರುವುದರಿಂದ, ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗುತ್ತಿದೆ ಎಂಬುದನ್ನು ಉದಾಹರಣೆಗಳ ಸಮೇತ ಸಚಿವರ ಗಮನಕ್ಕೆ ತರಲಾಯಿತು.
DRT ಮೂಲಕ ಪಾರದರ್ಶಕ ವಸೂಲಾತಿಗೆ ಒತ್ತಾಯ
ಈಗಾಗಲೇ ಅಸ್ತಿತ್ವದಲ್ಲಿರುವ DRT (Debt Recovery Tribunal) ಮೂಲಕ ಸುಸ್ಥಿ ಸಾಲಗಳ ವಸೂಲಾತಿ ಪ್ರಕ್ರಿಯೆ ನಡೆಸಿದರೆ, ಹೆಚ್ಚು ಪಾರದರ್ಶಕ ಮತ್ತು ನ್ಯಾಯಸಮ್ಮತ ತೀರ್ಮಾನಗಳು ಬರಬಹುದು ಎಂಬ ಅಭಿಪ್ರಾಯವನ್ನು ನಿಯೋಗ ವ್ಯಕ್ತಪಡಿಸಿತು.
ತುರ್ತು ಸಭೆಗೆ ಹಣಕಾಸು ಸಚಿವರ ಆದೇಶ
ನಿಯೋಗದೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಬ್ಯಾಂಕಿಂಗ್ ಮುಖ್ಯಸ್ಥರನ್ನು ಒಳಗೊಂಡಂತೆ ತುರ್ತು ಸಭೆ ಕರೆಯಲು ತಕ್ಷಣವೇ ಆದೇಶ ನೀಡಿರುವುದಾಗಿ ತಿಳಿದುಬಂದಿದೆ.
ಕಾಫಿ ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
