ತುಮಕೂರು: ವಿಕಲಚೇತನರು ದೇವರ ಮಕ್ಕಳು, ಕಾರಣಾಂತರದಿಂದ ಅವರು ಅಂಗವೈಕಲ್ಯದಿಂದ ಜನಿಸಿರಬಹುದು, ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಎಲ್ಲರ ಮೇಲೂ ಇದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ರಾಜ್ಯ ಕಿವುಡರ ಕ್ರೀಡಾ ಒಕ್ಕೂಟ ಏರ್ಪಡಿಸಿದ್ದ ಒಕ್ಕೂಟದ ಬೆಳ್ಳಿ ಮಹೋತ್ಸವ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕರು, ವಿಕಲಚೇತನರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು. ವಿಕಲಚೇತನರನ್ನು ಎಲ್ಲರ ಜೊತೆ ಸಮಾಜದ ಮುಖ್ಯವಾಹಿನಿಗೆ ಕರೆತರಲು ಎಲ್ಲರೂ ಕಾಳಜಿವಹಿಸಬೇಕು ಎಂದರು.
ವಿಕಲಚೇತನರು ಗೌರವದಿಂದ,ಸ್ವಾಭಿಮಾನದಿಂದ ಬದುಕುವಂತಹ ವಾತಾವರಣ ನಿರ್ಮಾಣ ಮಾಡಬೇಕು, ಬೇಧಭಾವ ಮಾಡದೆ ಅವರು ನೆಮ್ಮದಿಯಾಗಿ ಬಾಳಲು ನೈತಿಕ ಬೆಂಬಲ ನೀಡಬೇಕು ಎಂದು ಶಾಸಕರು ಹೇಳಿದರು.
ಸಾಧನೆ ಮಾಡಿದ ಕಿವುಡ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್, ಅಂಗವೈಕಲ್ಯದ ನಡುವೆಯೂ ಕ್ರೀಡೆಯಲ್ಲಿ ಸಾಧನೆ ಮಾಡಿರುವ ನಿಮ್ಮ ಸಾಧನೆ ನಮಗೆ ಪ್ರೇರಣೆಯಾಗುತ್ತದೆ. ನಾವೂ ಏನನ್ನಾದರೂ ಸಾಧಿಸಲು ಮತ್ತಷ್ಟು ಹುರುತು ಬರುತ್ತದೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹೇಳಿದರು.
ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎನ್ನುವ ಕಾರಣಕ್ಕೆ ನಗರದಲ್ಲಿ ಉದ್ಯೋಗ ಹಬ್ಬ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಆಸಕ್ತ, ಅರ್ಹ ವಿಕಲಚೇತನರು ಇದರ ಪ್ರಯೋಜನ ಪಡೆದು ಉದ್ಯೋಗ ಪಡೆಯಬಹುದು ಎಂದು ಶುಭಕಲ್ಯಾಣ್ ಹೇಳಿದರು.
ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎನ್.ಎಸ್. ಜಯಕುಮಾರ್ ಮಾತನಾಡಿ, ವಿಕಲಚೇತನರ ಜೊತೆ ನಾವಿದ್ದೇವೆ. ಅವರು ಕೀಳರಿಮೆ ಬಿಟ್ಟು ಸಾಧನೆಯತ್ತ ಗಮನ ಕೊಡಲಿ ಎಂದ ಅವರು, ಈ ಸಂಸ್ಥೆಯ ಜಿಲ್ಲಾ ಘಟಕಕ್ಕೆ ತಮ್ಮ ಸಂಸ್ಥೆಯಿಂದ 3 ಲಕ್ಷ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ವಿ.ಕುಮಾರ್, ಶೋಭಾ ಗಣೇಶನ್, ಸುನಿಲ ಎಂ. ಕಂದೂರ, ಕಾಡಪ್ಪ ಬಿ. ಗುಡದಿನ್ನಿ, ಜಿ.ಎಸ್. ನವೀನ್ಕುಮಾರ್, ಹೆಚ್.ಎಂ. ರವೀಶ್, ಶ್ರೀಮತಿಗಾಯತ್ರಿರವೀಶ್, ಟಿ.ವಿ. ಮನೋಹರ್, ಜೆ.ವಿ.ಮಹೇಶ್ ಶರ್ಮಾ, ಎಂ.ಜಿ. ನಾಗೇಂದ್ರನ್, ಕೆ.ಎಸ್.ಉಮಾಶಂಕರ್, ಎಸ್.ಎಸ್. ದೇವರಾಜು,ಬಿಜೆಪಿ ಹಿರಿಯ ಮುಖಂಡ ಹೆಚ್.ಎಂ.ಟಿ.ರವೀಶಯ್ಯ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
