ಬೆಂಗಳೂರು, ಜ.29:
ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಸರ್ಕಾರ ಮಹತ್ವದ ಸಡಿಲಿಕೆ ನೀಡಿದ್ದು, ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1) ಆದೇಶ ಹೊರಡಿಸಿದ್ದು, ಈ ಮೊದಲು ದಿನಾಂಕ 29.09.2025ರಂದು ನೀಡಲಾಗಿದ್ದ 3 ವರ್ಷಗಳ ವಯೋಮಿತಿ ಸಡಿಲಿಕೆ ಆದೇಶವನ್ನು ಹಿಂಪಡೆದು, ಅದರ ಬದಲಿಗೆ 5 ವರ್ಷಗಳ ಸಡಿಲಿಕೆಯನ್ನು ಜಾರಿಗೆ ತಂದಿದೆ.
ಸರ್ಕಾರದ ಆದೇಶದ ಪ್ರಕಾರ, ಈ ಆದೇಶ ಹೊರಡಿಸಿದ ದಿನಾಂಕದ ನಂತರದಿಂದ 31 ಡಿಸೆಂಬರ್ 2027ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಎಲ್ಲಾ ಅಧಿಸೂಚನೆಗಳಿಗೆ ಈ ಸಡಿಲಿಕೆ ಅನ್ವಯವಾಗಲಿದೆ. ಇದರಡಿ, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ, ಆಯಾ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ವಿಶೇಷ ಕ್ರಮವಾಗಿ (one-time measure) 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
ಈ ಹಿಂದೆ ಸರ್ಕಾರವು 06.09.2025ರ ಆದೇಶ ಮತ್ತು ನಂತರ 29.09.2025ರ ಆದೇಶದ ಮೂಲಕ 3 ವರ್ಷಗಳ ಸಡಿಲಿಕೆ ನೀಡಿತ್ತು. ಆದರೆ ಬಳಿಕ ಹಲವು ಉದ್ಯೋಗಾಕಾಂಕ್ಷಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಾತಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡುವಂತೆ ಮನವಿ ಸಲ್ಲಿಸಿದ್ದವು.
ಈ ಮನವಿಗಳನ್ನು ಪರಿಶೀಲಿಸಿದ ಸರ್ಕಾರ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಇದೀಗ 3 ವರ್ಷದ ಬದಲು 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲು ತೀರ್ಮಾನಿಸಿದೆ.
ಈ ಆದೇಶವನ್ನು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಸರ್ಕಾರದ ಅಧೀನ ಕಾರ್ಯದರ್ಶಿ ಆಶಾಕುಮಾರಿ ಎ. ಜಿ. ಅವರು ಹೊರಡಿಸಿದ್ದಾರೆ.


