ಹಾಸನ/ಬೆಂಗಳೂರು, ಮಾ.28: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವೀಡಿಯೋಗಳ ಪೆನ್ಡ್ರೈವ್ ಹಂಚಿಕೆ ಪ್ರಕರಣದ ತನಿಖೆಯನ್ನು ಸಮರ್ಥವಾಗಿ ಮುನ್ನಡೆಸಿ, 13 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದ ಹಾಸನದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಎಂ.ಕೆ. ತಮ್ಮಯ್ಯ ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ, ಪ್ರಾಮಾಣಿಕತೆ ಹಾಗೂ ದಕ್ಷತೆ ತೋರಿದ ಹಿನ್ನೆಲೆಯಲ್ಲಿ ಒಟ್ಟು 153 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ. ಇದೇ ವೇಳೆ, ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪದಕ ಪ್ರದಾನ ನಡೆಯಲಿದೆ.
ಒಟ್ಟು 153 ಮಂದಿಯ ಪಟ್ಟಿಯಲ್ಲಿ 6 ಮಂದಿ ಐಪಿಎಸ್ ಅಧಿಕಾರಿಗಳು ಸ್ಥಾನ ಪಡೆದಿದ್ದು, ಹಾಸನದ ಎಂ.ಕೆ. ತಮ್ಮಯ್ಯ ಅವರ ಹೆಸರು ಜಿಲ್ಲೆಯ ಮಟ್ಟದಲ್ಲಿ ವಿಶೇಷ ಗಮನ ಸೆಳೆದಿದೆ.
ಪ್ರಮುಖ ಅಧಿಕಾರಿಗಳಿಗೆ ಗೌರವ
ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ಪ್ರಮುಖ ಅಧಿಕಾರಿಗಳಲ್ಲಿ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್, ಉಡುಪಿ ಜಿಲ್ಲೆಯ ಡಾ. ಕೆ. ಅರುಣ್, ಯಾದಗಿರಿಯ ಪೃಥ್ವಿಕ್ ಶಂಕರ್, ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಡಾ. ಗೋಪಾಲ ಎಂ. ಬ್ಯಾಕೋಡ, ಹಾಸನದ ಎಂ.ಕೆ. ತಮ್ಮಯ್ಯ ಹಾಗೂ ಶಿವಮೊಗ್ಗದ ಎಎಸ್ಪಿ-2 ಎಸ್. ರಮೇಶ್ ಕುಮಾರ್ ಸೇರಿದ್ದಾರೆ.
ಇದಲ್ಲದೆ, 12 ಮಂದಿ ಡಿವೈಎಸ್ಪಿಗಳು ಹಾಗೂ ವಿವಿಧ ಹಂತದ ಪೊಲೀಸ್ ಸಿಬ್ಬಂದಿಗೂ ಪದಕ ಲಭಿಸಿದೆ ಎಂದು ತಿಳಿದುಬಂದಿದೆ.
ಸಮಾರಂಭಕ್ಕೆ ಸಮವಸ್ತ್ರದಲ್ಲಿ ಹಾಜರಾಗುವಂತೆ ಸೂಚನೆ
ಪದಕ ವಿಜೇತರು ನಿಗದಿತ ಸಮವಸ್ತ್ರದಲ್ಲಿ ಸಮಾರಂಭಕ್ಕೆ ಹಾಜರಾಗುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಸೂಚನೆ ನೀಡಿದ್ದಾರೆ.
ನಿವೃತ್ತಿಗೂ ಮುನ್ನ ಮತ್ತೊಂದು ಗೌರವ
ಗಮನಾರ್ಹ ಸಂಗತಿಯೇನೆಂದರೆ, ಎಂ.ಕೆ. ತಮ್ಮಯ್ಯ ಅವರು ಇನ್ನೂ ಕೆಲವೇ ತಿಂಗಳಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದು, ನಿವೃತ್ತಿಗೆ ಮುನ್ನವೇ ಈ ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ದೊರೆತಿರುವುದು ಅವರ ಪೊಲೀಸ್ ಜೀವನದ ಮಹತ್ವದ ಗೌರವವಾಗಿ ಪರಿಗಣಿಸಲಾಗಿದೆ.
