ರಾಮನಾಥಪುರ, ಮಾ.29 : ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತರು ಹಾಗೂ ದಾಸರು ಕಂಡುಕೊಂಡಿರುವ ಬೆಳಿದಾರಿ ಸಂಗೀತವಾಗಿದ್ದು, ಜೀವನದ ಸಂಕಷ್ಟಗಳ ಸಾಗರವನ್ನು ದಾಟಿ ಸುಖ, ಸಂತೃಪ್ತಿ, ನೆಮ್ಮದಿ ಮತ್ತು ಶಾಂತಿಯ ದಡ ಸೇರಲು ಭಗವಂತನು ಕರುಣಿಸಿರುವ ಪರಮೋತ್ತಮ ಸಾಧನವೇ ಸಂಗೀತ ಎಂದು ಶ್ರೀ ಪಟ್ಟಾಭಿರಾಮ ಸೇವಾ ಸಮಿತಿಯ ಅಧ್ಯಕ್ಷ ಎಂ.ಆರ್. ಬದರಿನಾಥ್ ಅಭಿಪ್ರಾಯಪಟ್ಟರು.

ಅವರು ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಸಂಗೀತೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದುಷಿ ಯೋಗ ಕೀರ್ತನ ಅವರು ಭಕ್ತಿರಸದ ಹಾಡುಗಾರಿಕೆಯನ್ನು ನಡೆಸಿಕೊಟ್ಟು ಸಂಗೀತಾಸಕ್ತರ ಮನಸೆಳೆದರು. ಅವರಿಗೆ ವಿದುಷಿ ಸಿ.ವಿ. ಶೃತಿ ಪಿಟೀಲು ಸಹಕಾರ ನೀಡಿದರೆ, ವಿ. ಅನಿರುದ್ಧ್ ಭಟ್ ಮೃದಂಗ ಹಾಗೂ ವಿ. ಶರತ್ ಕೌಶಿಕ್ ಘಟಂ ವಾದನದ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.

ಕಾರ್ಯಕ್ರಮದ ನಂತರ ಮಾತನಾಡಿದ ಎಂ.ಆರ್. ಬದರಿನಾಥ್, ನಲ್ಮೆಯ ದೈವಭಕ್ತರು ಹಾಗೂ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಗೀತೋತ್ಸವವನ್ನು ಯಶಸ್ವಿಗೊಳಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸೇವಾ ಸಮಿತಿಯ ಕಾರ್ಯದರ್ಶಿ ಆರ್.ಆರ್. ಶ್ರೀನಿವಾಸ್, ಸದಸ್ಯರಾದ ಆರ್.ಎಸ್. ನರಸಿಂಹಮೂರ್ತಿ, ಕೃಷ್ಣಯ್ಯಂಗಾರ್, ಜನಾರ್ಧನ್, ತಿರುಮಲಚಾರ್, ಆರ್. ಶ್ರೀನಿವಾಸ್, ಶ್ರೀನಿಧಿ, ರಾ.ಸು. ನಾಗರಾಜ್, ಸತೀಶ್, ಮೋಹನ್, ವಕೀಲ ಶ್ರೀವತ್ಸಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
