ಬೆಂಗಳೂರು, ಮಾ.31: ಒಂಟಿತನದಲ್ಲಿ ಜೀವನ ಸಾಗಿಸುತ್ತಿದ್ದ 63 ವರ್ಷದ ವೃದ್ಧ ಆನೆ ಗಜೇಂದ್ರನಿಗೆ ಇಂದು ಹೊಸ ಬದುಕಿನ ಆರಂಭವಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಮಾನವೀಯ ಸ್ಪಂದನೆಯೊಂದಿಗೆ, ಚಾಮರಾಜನಗರ ಜಿಲ್ಲೆಯ ಬೂದಿಪಡಗ ಆನೆ ಶಿಬಿರದಲ್ಲಿದ್ದ ಗಜೇಂದ್ರನನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮತ್ತಿಗೋಡು ಶಿಬಿರಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ರಾಜ್ಯದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ಬಾರಿ ಭಾಗವಹಿಸಿ ಜನಮನ ಗೆದ್ದಿದ್ದ ಗಜೇಂದ್ರ, ಇತ್ತೀಚಿನ ದಿನಗಳಲ್ಲಿ ಒಂಟಿತನದಲ್ಲಿ ಬದುಕುತ್ತಿದ್ದ. ಗುಂಪಿನಲ್ಲಿ ವಾಸಿಸುವ ಸೂಕ್ಷ್ಮ ಮನಸ್ಸಿನ ಪ್ರಾಣಿಯಾದ ಆನೆಗೆ ಈ ಏಕಾಂತ ಜೀವನ ಕಷ್ಟಕರವಾಗಿತ್ತು. ಇದರ ಪರಿಣಾಮವಾಗಿ ಗಜೇಂದ್ರ ದೇಹಶಕ್ತಿ ಕಳೆದುಕೊಂಡು, ಕಾಡಿನಲ್ಲಿ ಬದುಕುವ ಸಾಮರ್ಥ್ಯವೂ ಕುಂಠಿತಗೊಂಡಿತ್ತು ಎಂದು ತಿಳಿದುಬಂದಿದೆ.
ಗಜೇಂದ್ರನ ಸ್ಥಿತಿ ಕಂಡು ಕಳವಳಗೊಂಡ ಸಾರ್ವಜನಿಕರು ಹಾಗೂ ಪ್ರಾಣಿ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿ, “ಅವನಿಗೆ ಸಂಗಾತಿ ಬೇಕು, ಸುರಕ್ಷಿತ ಆಶ್ರಯ ಬೇಕು” ಎಂದು ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾ.26ರಂದು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಇಂದು ಮಧ್ಯಾಹ್ನ ಬೂದಿಪಡಗ ಶಿಬಿರದಲ್ಲಿ ಗಜೇಂದ್ರನಿಗೆ ಪೂಜೆ ಸಲ್ಲಿಸಿದ ಬಳಿಕ, ಅರಣ್ಯ ಇಲಾಖೆಯ ವಿಶೇಷ ವಾಹನದ ಮೂಲಕ ಮತ್ತಿಗೋಡು ಶಿಬಿರಕ್ಕೆ ಕರೆದೊಯ್ಯಲಾಯಿತು.
ಈ ಸ್ಥಳಾಂತರ ಕೇವಲ ಆಡಳಿತಾತ್ಮಕ ಕ್ರಮವಲ್ಲ; ಒಂದು ಜೀವಿಗೆ ಮತ್ತೆ ಸಂತೋಷ, ಸಂಗಾತಿ ಮತ್ತು ಭದ್ರತೆ ನೀಡಿದ ಮಾನವೀಯ ಹೆಜ್ಜೆಯಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಗಜೇಂದ್ರನ ಹೊಸ ಬದುಕಿಗೆ ಸಾರ್ವಜನಿಕರು ಶುಭ ಹಾರೈಸುತ್ತಿದ್ದು, ಅರಣ್ಯ ಸಚಿವರ ಕರುಣೆಯ ನಡೆಗೆ ವ್ಯಾಪಕವಾಗಿ ಅಭಿನಂದನೆ ವ್ಯಕ್ತಪಡಿಸುತ್ತಿದ್ದಾರೆ.
