ಮೈಸೂರು, ಮಾ.31: ಮೈಸೂರಿನ ಲೇಖಕ ಕಾಳಿಹುಂಡಿ ಶಿವಕುಮಾರ್ ಅವರು ಕಳೆದ 25 ವರ್ಷಗಳಿಂದ ಸಂಗ್ರಹಿಸಿರುವ ವಿವಿಧ ಕವಿ-ಲೇಖಕರ ಪುಸ್ತಕಗಳು, ವಾರಪತ್ರಿಕೆಗಳು ಹಾಗೂ ಮಾಸಪತ್ರಿಕೆಗಳ ಬೃಹತ್ ಸಂಗ್ರಹವನ್ನು ಮೈಸೂರಿನ ಗೋವಿಂದ ರಾವ್ ಮೆಮೋರಿಯಲ್ ಪಿಯು ಕಾಲೇಜಿನ ಮೊದಲ ಮಹಡಿಯಲ್ಲಿ ಒಂದೇ ಸ್ಥಳದಲ್ಲಿ ವ್ಯವಸ್ಥಿತವಾಗಿ ಸಂಗ್ರಹಿಸಲು ಕಾಲೇಜು ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ.
ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಾಹಿತಿ ಗೊರೂರು ಅನಂತರಾಜು ಅವರು ಕಾಲೇಜು ಆವರಣಕ್ಕೆ ಭೇಟಿ ನೀಡಿ, ಸಂಗ್ರಹಿತ ಗ್ರಂಥಾಲಯವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಅವರು ಗ್ರಂಥಾಲಯಕ್ಕೆ ಕೆಲವು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.
ಕಾಳಿಹುಂಡಿ ಶಿವಕುಮಾರ್ ಅವರ ಪುಸ್ತಕಗಳನ್ನು ಕೊಂಡು ಓದುವ ಮತ್ತು ಸಂಗ್ರಹಿಸುವ ಅಪೂರ್ವ ಹವ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗೊರೂರು ಅನಂತರಾಜು, ಇಂತಹ ಬೃಹತ್ ಸಂಗ್ರಹವನ್ನು ಮತ್ತಷ್ಟು ವ್ಯವಸ್ಥಿತವಾಗಿ ಜೋಡಿಸಲು ಕಪಾಟುಗಳು, ಬೀರುಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಸಾರ್ವಜನಿಕರು ಮತ್ತು ದಾನಿಗಳು ಒದಗಿಸಿದರೆ ಉತ್ತಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗೋವಿಂದ ರಾವ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್ ಮಾತನಾಡಿ, ಕಾಲೇಜಿನ ಮೊದಲ ಮಹಡಿಯಲ್ಲಿ ಶಿವಕುಮಾರ್ ಅವರ ಸಂಗ್ರಹಕ್ಕೆ ಸ್ಥಳಾವಕಾಶ ಒದಗಿಸಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯವಸ್ಥಿತವಾಗಿ ಸಂಗ್ರಹಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಶಿವಕುಮಾರ್ ಅವರು ನಾಡು-ನುಡಿ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳು, ಲೇಖನಗಳು, ಪುಸ್ತಕಗಳು ಹಾಗೂ ಮ್ಯಾಗಜಿನ್ಗಳನ್ನು ಸಂಗ್ರಹಿಸಿದ್ದು, ಇದು ಅಮೂಲ್ಯ ಸಂಪತ್ತಾಗಿದೆ ಎಂದರು. ಕಳೆದ 30 ವರ್ಷಗಳ ದಿನಪತ್ರಿಕೆಗಳನ್ನು ಕೂಡ ಬೇರೆಡೆ ಸಂಗ್ರಹಿಸಿಟ್ಟಿರುವುದಾಗಿ ತಿಳಿಸಿ, ಅವುಗಳನ್ನೂ ಒಟ್ಟುಗೂಡಿಸಿ ವ್ಯವಸ್ಥಿತವಾಗಿ ಸಂರಕ್ಷಿಸಬೇಕಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸಾರ್ವಜನಿಕರು ಬಂದು ಓದಲು ಅನುಕೂಲವಾಗುವಂತೆ ಕಾಲೇಜು ಆಡಳಿತ ಮಂಡಳಿ ಚಿಂತನೆ ನಡೆಸಬೇಕು. ಇಂತಹ ಜ್ಞಾನಭಂಡಾರವನ್ನು ಉಳಿಸಿ ಬೆಳೆಸಲು ಓದುಗರು, ದಾನಿಗಳು ಹಾಗೂ ಸಾಹಿತ್ಯಾಸಕ್ತರು ಉದಾರವಾಗಿ ನೆರವು-ಸಹಕಾರ ನೀಡಬೇಕಿದೆ ಎಂದು ಅವರು ಮನವಿ ಮಾಡಿದರು.
ಲೇಖಕ ಕಾಳಿಹುಂಡಿ ಶಿವಕುಮಾರ್ ಮಾತನಾಡಿ, ತಮ್ಮ ದೀರ್ಘಕಾಲದ ಸಂಗ್ರಹಕ್ಕೆ ಸ್ಥಳಾವಕಾಶ ಒದಗಿಸಿದ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು.
