ರಾಮನಾಥಪುರ, ಏ.1: ಪಟ್ಟಣದ ಐತಿಹಾಸಿಕ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ನಡೆಯುತ್ತಿರುವ ಉತ್ಸವದ 6ನೇ ದಿನ, ಬೆಂಗಳೂರಿನ ನೃತ್ಯನ್ವೇಷಣ ವಿದುಷಿ ಶ್ರೀಮತಿ ಎನ್.ಎಸ್. ಸುಪ್ರಜಾ ಹಾಗೂ ತಂಡ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಭಕ್ತರು ಹಾಗೂ ಕಲಾರಸಿಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಪಟ್ಟಾಭಿರಾಮ ದೇವಾಲಯದ ಮಾಜಿ ಕನ್ವಿನರ್ ಆರ್.ಎಸ್. ನರಸಿಂಹಮೂರ್ತಿ, “ನಿಮ್ಮ ಮಕ್ಕಳಿಗೆ ಭರತನಾಟ್ಯ ಕಲಿಕೆಗೆ ಎಲ್ಲರೂ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕು. ಭರತನಾಟ್ಯವು ಪ್ರಪಂಚದ ಮೂಲೆ ಮೂಲೆಗಳಲ್ಲಿ ಭಾರತೀಯ ಸಂಸ್ಕೃತಿಯೊಂದಿಗೆ ಬೆರೆತು ಆತ್ಮೀಯತೆಯನ್ನು ಮೂಡಿಸುವ ಶ್ರೇಷ್ಠ ಕಲೆ. ಮಕ್ಕಳು ಈ ಸಾಧನೆಯಲ್ಲಿ ಮುಂದುವರಿದು ಸಂಸ್ಕೃತಿಯನ್ನು ಉಳಿಸಬೇಕು” ಎಂದು ಹೇಳಿದರು.

ಅವರು ಮುಂದುವರೆದು, “ಇಂದು ಎಲ್ಲಾ ವರ್ಗದ ಮಕ್ಕಳು ಭರತನಾಟ್ಯದಲ್ಲಿ ಹೆಸರು ಮಾಡುತ್ತಿದ್ದಾರೆ. ಭರತನಾಟ್ಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಗೌರವವಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚು ಹೆಚ್ಚು ಬೆಳೆಯಬೇಕು. ಅದಕ್ಕೆ ಸ್ಥಳೀಯರ ಸಹಕಾರ ಅತ್ಯಂತ ಮುಖ್ಯ” ಎಂದು ಅಭಿಪ್ರಾಯಪಟ್ಟರು.

ಈ ದಿನದ ಸೇವಾಕರ್ತರಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ತಾರಾಮಂಜು, ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು, ಮಡಿಕೇರಿ ಶಾಸಕರು ಮಂತರ್ ಗೌಡ ಪೂಜಾ ಹಾಗೂ ಪ್ರಸಾದ ವ್ಯವಸ್ಥೆಯನ್ನು ನೆರವೇರಿಸಿದರು.
ದೇವಾಸ್ಥಾನದ ಮುಖ್ಯ ಅರ್ಚಕರಾದ ಶ್ರೀನಿವಾಸ ಭಟ್ಟರು ಪೂಜಾ ಕೈಂಕರ್ಯ ನೆರವೇರಿಸಿದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
