ರಾಮನಾಥಪುರ, ಏ.3: ಜನರಲ್ಲಿ ನದಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ವತಿಯಿಂದ ಕಳೆದ 15 ವರ್ಷಗಳಿಂದ ಪ್ರತೀ ಹುಣ್ಣಿಮೆ ದಿನ ಕಾವೇರಿ ನದಿ ಸ್ವಚ್ಚತಾ ಕಾರ್ಯಕ್ರಮ ಹಾಗೂ ಕಾವೇರಿಗೆ ಮಹಾ ಆರತಿ ನೆರವೇರಿಸಲಾಗುತ್ತಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ತಿಳಿಸಿದ್ದಾರೆ.
ಪಟ್ಟಣದ ಕಾವೇರಿ ನದಿಯಲ್ಲಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 151ನೇ ಹುಣ್ಣಿಮೆ ದಿನದ ನದಿ ಸ್ವಚ್ಚತಾ ಕಾರ್ಯಕ್ರಮ ಹಾಗೂ ಕಾವೇರಿ ನದಿಗೆ ಮಹಾ ಆರತಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ಇಲ್ಲಿಯವರೆಗೆ 151 ಹುಣ್ಣಿಮೆ ದಿನಗಳಂದು ನಿರಂತರವಾಗಿ ನದಿ ಸ್ವಚ್ಚತೆ ಮತ್ತು ಕಾವೇರಿಗೆ ಮಹಾ ಆರತಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಕಾವೇರಿ ನದಿ ಸಂರಕ್ಷಣೆಗಾಗಿ ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನವರೆಗೆ ಸಮಗ್ರ ನದಿ ಸಂರಕ್ಷಣೆಗೆ ವಿಶೇಷ ಕಾಯ್ದೆ ರೂಪಗೊಳ್ಳಬೇಕು ಎಂಬುದು ನಮ್ಮ ಆಶಯ” ಎಂದು ಹೇಳಿದರು.

ವಿಶೇಷ ಕಾಯ್ದೆ ರೂಪಿಸುವಂತೆ ಒತ್ತಾಯ
ಕಾವೇರಿ ನದಿ ರಕ್ಷಣೆಗಾಗಿ ಕಳೆದ 15 ವರ್ಷಗಳಿಂದ ಸಾಧು-ಸಂತರು ಹಾಗೂ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದಾರೆ ಎಂದು ಅವರು ತಿಳಿಸಿದರು.
ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಯಬೇಕು
ಗ್ರಾಮೀಣ ಭಾಗಗಳಿಂದ ಬರುವ ಭಕ್ತರು ನದಿಗೆ ಉಟ್ಟ ಬಟ್ಟೆಗಳು, ದೇವಾಲಯದ ಹಳೆ ಮರದ ವಸ್ತುಗಳು, ಹಳೆ ಬಟ್ಟೆಗಳು, ಮಾವಿನಸೊಪ್ಪು, ಬಾಳೆಕಂದು ಸೇರಿದಂತೆ ವಿವಿಧ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ನದಿಗೆ ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ತಡೆಯಲು ಜಿಲ್ಲಾಧಿಕಾರಿಗಳು ತಕ್ಷಣ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಪೂಜೆ ಸಲ್ಲಿಕೆ
ಈ ಸಂದರ್ಭದಲ್ಲಿ ಕಾವೇರಿ ನದಿ ಆಂದೋಲನ ಸಮಿತಿ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಕಾವೇರಿ ನದಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ
- ಸಮಿತಿ ತಾಲ್ಲೂಕು ಅಧ್ಯಕ್ಷ ಸಿದ್ದರಾಜು,
- ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಕೆ. ಶ್ರೀನಿವಾಸ್
ಮುಂತಾದವರು ಉಪಸ್ಥಿತರಿದ್ದರು.– ಕುಮಾರಸ್ವಾಮಿ ಎಂ.ಎನ್
