ಚನ್ನರಾಯಪಟ್ಟಣ: ಎರಡು ದಶಕಗಳ ಕಾಲ ದೇಶಸೇವೆಯ ಬಳಿಕ ವೀರ ಯೋಧನಿಗೆ ಭವ್ಯ ಸ್ವಾಗತ ಕೋರಿದ ತೊಳಸಿ ಮತ್ತು ಅಕ್ಕ ಪಕ್ಕದ ಗ್ರಾಮಸ್ಥರು
ಎರಡು ದಶಕಗಳ ಕಾಲ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಮರಳಿದ ವೀರ ಯೋಧ ಟಿ ಎನ್ ವಿಜಯಕುಮಾರ್ ಅವರಿಗೆ ಗ್ರಾಮಸ್ಥರು ಭವ್ಯ ಹಾಗೂ ಹೃದಯಸ್ಪರ್ಶಿ ಸ್ವಾಗತ ಕೋರಿದರು.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ತೊಳಸಿ ಗ್ರಾಮದ ನಿವಾಸಿಯಾದ ಟಿ ಆರ್ ವಿಜಯ್ ಕುಮಾರ್ ಅವರು 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇಂದು ಹುಟ್ಟೂರಿಗೆ ಆಗಮಿಸಿದರು. ಸೇನಾ ಸಮವಸ್ತ್ರದಲ್ಲೇ ಹಾಸನ ಮತ್ತು ಮಂಡ್ಯ ಜಿಲ್ಲೆಯ ಗಡಿ ಭಾಗವಾದ ಆನೆಗೊಳ ಗ್ರಾಮಕ್ಕೆ ಬಂದಿಳಿದ ಯೋಧನ ಮೇಲೆ ಸ್ಥಳೀಯರು ಜೆಸಿಬಿ ಮೇಲೇರಿ ಹೂಮಳೆ ಸುರಿಸಿ, ಸಿಹಿ ವಿತರಣೆ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಭಾರತ ದೇಶಕ್ಕೆ ಹಾಗೂ ಭಾರತ ಮಾತೆಗೆ ಜೈಕಾರದ ಘೋಷಣೆಗಳು ಮೊಳಗಿದವು.

ಮಂಡ್ಯ ಜಿಲ್ಲೆಯ ಗಡಿ ಗ್ರಾಮವಾದ ಆನೆಗೊಳದಲ್ಲಿ ಗ್ರಾಮಸ್ಥರೆಲ್ಲ ಸೇರಿ ಅದ್ದೂರಿಯಾಗಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಬರಮಾಡಿಕೊಂಡರು. ಟಿ ಆರ್ ವಿಜಯ್ ಕುಮಾರ್ ಅವರು ತಮ್ಮ ಸೇವಾ ಅನುಭವವನ್ನು ಹಂಚಿಕೊಂಡರು. ಮಹಾರಾಷ್ಟ್ರದಲ್ಲಿ ತರಬೇತಿ ಪಡೆದ ಬಳಿಕ, ಗುಜರಾತ್ ಬಿಹಾರ್, ಪಂಜಾಬ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿದಂತೆ ಜಮ್ಮು-ಕಾಶ್ಮೀರ, ಅಸ್ಸಾಂ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ,” ಎಂದು ವಿವರಿಸಿದರು.

ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಮರಳುವುದು ಮರುಹುಟ್ಟು ಪಡೆದ ಅನುಭವದಂತೆ ಇದೆ. ನನಗೆ ಆತ್ಮೀಯವಾಗಿ ಸ್ವಾಗತ ಕೋರಿದ ಎಲ್ಲರಿಗೂ ಧನ್ಯವಾದಗಳು ಎಂದ ಅವರು, ಯುವಜನತೆ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಮಂಜುನಾಥ್ ಮಾತನಾಡಿ ಅವರು ಯೋಧನಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, “ದೇಶ ಸೇವೆಗಾಗಿ ತಂದೆ-ತಾಯಿ ಹಾಗೂ
ಕುಟುಂಬವನ್ನು ಬಿಟ್ಟು ದೂರ ಹೋಗಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುವುದು ಅತ್ಯಂತ ಕಷ್ಟದ ಕೆಲಸ. 20 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ ಟಿ ಆರ್ ವಿಜಯ್ ಕುಮಾರ್ ಸೇವೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.” ಎಂದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಈ ಮೆರವಣಿಗೆಯಲ್ಲಿ ಯೋಧನ ಪತ್ನಿ, ಇಬ್ಬರು ಮಕ್ಕಳು, ತುಳಸಿ ಗ್ರಾಮಸ್ಥರಾದ ಗಜ, ಡೈರಿ ಲೋಕೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಟಿ ಎನ್ ರಮೇಶ್, ಗ್ರಾಮದ ಮುಖಂಡರುಗಳಾದ ದಿನೇಶ್, ಯೋಗೇಶ್, ಗಿರೀಶ್,ಕೊಂಟಣ್ಣ ನಿಂಗರಾಜು, ಪುಟ್ಟೇಗೌಡ, ಚಿಕ್ಕೆಗೌಡ, ಸಚಿನ್, ಕಳ್ಳಿಕಟ್ಟೆ ರವಿ, ಮಂಜು ಮಾಸ್ಟರ್ ಗಿರಿಜಾ ಮೇಡಂ, ಸೇರಿದಂತೆ ಅಪಾರ ಸಂಖ್ಯೆಯ ಬಂಧುಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಐ ಕೆ ಮಂಜುನಾಥ್
