ಹಾಸನ, ಏ.4: ಭಾರತೀಯ ಜನಗಣತಿ-2027 ಹಿನ್ನೆಲೆ ಹಾಸನ ಜಿಲ್ಲೆಯಲ್ಲಿ ಪೂರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಆಡಳಿತಾತ್ಮಕ ಮಟ್ಟದಲ್ಲಿ ತರಬೇತಿ, ಮಾನವ ಸಂಪನ್ಮೂಲ ನಿಯೋಜನೆ ಹಾಗೂ ತಾಂತ್ರಿಕ ರೂಪುರೇಷೆಗಳನ್ನು ಯಶಸ್ವಿಯಾಗಿ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಟ್ಟದಲ್ಲಿ ಈಗಾಗಲೇ 26 ಚಾರ್ಜ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಾರ್ಚ್ 9ರಿಂದ 11ರವರೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಷಯ ನಿರ್ವಾಹಕರು ಹಾಗೂ ತಾಂತ್ರಿಕ ಸಹಾಯಕರಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಫೆಬ್ರವರಿ 24ರಿಂದ 27ರವರೆಗೆ ಮೈಸೂರು ಎ.ಟಿ.ಐ.ನಲ್ಲಿ ಪ್ರಧಾನ ತರಬೇತಿದಾರರಿಗೆ (ಮಾಸ್ಟರ್ ಟ್ರೈನರ್ಸ್) ತರಬೇತಿ ನೀಡಲಾಗಿತ್ತು. ನಂತರ ಜಿಲ್ಲಾ ಮಟ್ಟದಲ್ಲಿ 78 ಫೀಲ್ಡ್ ಟ್ರೈನರ್ಸ್ಗಳಿಗೆ ಮಾರ್ಚ್ 16ರಿಂದ 20ರವರೆಗೆ ಎರಡು ಹಂತಗಳಲ್ಲಿ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ವಿವರಿಸಿದರು.
ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಗಣತಿ ಬ್ಲಾಕ್ಗಳ ಗುರುತಿಸುವ ಕಾರ್ಯ ಸಂಪೂರ್ಣಗೊಂಡಿದ್ದು, ಒಟ್ಟು 4,271 ಗಣತಿ ಬ್ಲಾಕ್ಗಳನ್ನು ರಚಿಸಲಾಗಿದೆ. ಈ ಕಾರ್ಯಕ್ಕಾಗಿ 3,969 ಗಣತಿದಾರರು ಹಾಗೂ 734 ಮೇಲ್ವಿಚಾರಕರನ್ನು ಸಿಎಮ್ಎಮ್ಎಸ್ ಪೋರ್ಟಲ್ ಮೂಲಕ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ವಿಶೇಷ ಗಮನದ ಭಾಗವಾಗಿ ಸಕಲೇಶಪುರ ತಾಲೂಕಿನ ಬಸವನಹಳ್ಳಿ ಹಾಗೂ ಹಾಸನ ತಾಲೂಕಿನ ಕಂಚಮಾರನಹಳ್ಳಿ ಗ್ರಾಮಗಳನ್ನು ಮಿಲಿಟರಿ ಕ್ಯಾಂಪ್ಗಳ ವಿಶೇಷ ನಿಯೋಜನೆಯಾಗಿ ಗುರುತಿಸಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ 43 ಎಸ್ಆರ್ಎಸ್ (ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್) ಗ್ರಾಮಗಳು ಹಾಗೂ 105 ಸ್ಲಂ ಬ್ಲಾಕ್ಗಳು ಇರುವುದರಿಂದ ಈ ಪ್ರದೇಶಗಳ ಮೇಲೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದರು.
ಸ್ವಯಂ-ಗಣತಿಗೆ ಅವಕಾಶ
ಕೇಂದ್ರ ಗೃಹ ಸಚಿವಾಲಯ 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು, ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ ವೇಳೆ ಮೊದಲ 15 ದಿನಗಳ ಕಾಲ Census ವೆಬ್ಸೈಟ್ ಮೂಲಕ ಸ್ವಯಂ-ಗಣತಿಗೆ ಅವಕಾಶ ಇರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15 ರಿಂದ 20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಸಲ್ಲಿಸಬಹುದು. ಬಳಿಕ ಮೊಬೈಲ್ ಅಥವಾ ಇಮೇಲ್ ಮೂಲಕ ಸ್ವಯಂ-ಗಣತಿ ಐಡಿ ಪಡೆಯಬಹುದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಣ ಹಾಗೂ ಅಂತಿಮ ಸಲ್ಲಿಕೆಗೆ ಆ ಐಡಿಯನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು.
ಜನಗಣತಿ ಪ್ರಕ್ರಿಯೆ ದೇಶದ ಅಭಿವೃದ್ಧಿಗೆ ಅಗತ್ಯವಾದ ಮೂಲಭೂತ ಮಾಹಿತಿಯನ್ನು ಒದಗಿಸುವ ಮಹತ್ವದ ಕಾರ್ಯವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂ ಸ್ವಯಂಪ್ರೇರಿತವಾಗಿ ಭಾಗವಹಿಸಿ ಸರ್ಕಾರಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
