ಹಾಸನ: ಮಾನನಷ್ಟ ಮೊಕದ್ದಮೆ ಎಂಬ ಕಾನೂನು ಸಾಧನವನ್ನು ನ್ಯಾಯಕ್ಕಾಗಿ ಬಳಸುವ ಬದಲು, ಇತ್ತೀಚಿನ ದಿನಗಳಲ್ಲಿ ಕೆಲವರು ಅದನ್ನು ಬೆದರಿಕೆ ಹಾಗೂ ವೈಯಕ್ತಿಕ ದ್ವೇಷ ಸಾಧನೆಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ಖ್ಯಾತ ವಕೀಲ ಸೂರ್ಯ ಮುಕುಂದರಾಜ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಡಿವಿಜಿ ಸಭಾಂಗಣದಲ್ಲಿ ಸಾಂಸ್ಕೃತಿಕ ಸಮಿತಿಯಿಂದ ಆಯೋಜಿಸಲಾದ “ಸ್ಟಡಿ ವಿತ್ ಸೊಸೈಟಿ” ಕಾರ್ಯಕ್ರಮದಲ್ಲಿ ಅವರು “ಮಾನನಷ್ಟ ಮೊಕದ್ದಮೆ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿನ ಪತ್ರಿಕೋದ್ಯಮ” ವಿಷಯ ಕುರಿತು ವಿಶ್ಲೇಷಣಾತ್ಮಕ ಉಪನ್ಯಾಸ ನೀಡಿದರು. ಇಂದಿನ ಮಾಹಿತಿ ಯುಗದಲ್ಲಿ ಕಾನೂನು ಜ್ಞಾನ ಮತ್ತು ಜವಾಬ್ದಾರಿಯುತ ವರದಿಗಾರಿಕೆ ಎರಡೂ ಸಮಾನವಾಗಿ ಮುಖ್ಯವಾಗಿವೆ ಎಂದು ಅವರು ಒತ್ತಿ ಹೇಳಿದರು. ಮಾನನಷ್ಟ ಮೊಕದ್ದಮೆ ದಾಖಲಾಗಿದೆಯೆಂದರೆ ತಕ್ಷಣ ಶಿಕ್ಷೆ ಆಗುತ್ತದೆ ಎಂಬ ಭಾವನೆ ತಪ್ಪು. ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳ ನಂತರವೇ ಸತ್ಯಾಸತ್ಯತೆ ನಿರ್ಧಾರವಾಗುತ್ತದೆ. ಭಾರತೀಯ ದಂಡ ಸಂಹಿತೆಯ ೪೯೯ ಮತ್ತು ೫೦೦ ಸೆಕ್ಷನ್ಗಳಡಿ ಆರೋಪಗಳಿಗೆ ಸ್ಪಷ್ಟವಾದ ರಕ್ಷಣಾ ಅವಕಾಶಗಳಿವೆ. ಪೂರಕ ದಾಖಲೆಗಳು ಹಾಗೂ ನಿಖರ ಮಾಹಿತಿ ಇದ್ದರೆ ಆರೋಪಿಗಳು ತಮ್ಮನ್ನು ತಾವು ಕಾನೂನುಬದ್ಧವಾಗಿ ರಕ್ಷಿಸಿಕೊಳ್ಳಬಹುದು ಎಂದು ವಿವರಿಸಿದರು.

ಅದರ ಜೊತೆಗೆ “ರೈಟ್ ಟು ಸೈಲೆನ್ಸ್” ಸಹ ಒಂದು ಪ್ರಮುಖ ಹಕ್ಕಾಗಿದ್ದು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ವ್ಯಕ್ತಿಯು ತನ್ನನ್ನು ತಾನು ಬಲವಂತವಾಗಿ ದೋಷಾರೋಪಣೆಗೊಳಿಸಬೇಕಾಗಿಲ್ಲ ಎಂದು ಹೇಳಿದರು. ಪತ್ರಕರ್ತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದರೂ ಅದು ಜವಾಬ್ದಾರಿಯುತವಾಗಿರಬೇಕು. ದಾಖಲೆಗಳಿಲ್ಲದೆ ಅಥವಾ ಸಮಗ್ರ ಪರಿಶೀಲನೆ ಇಲ್ಲದೆ ಸುದ್ದಿಗಳನ್ನು ಪ್ರಕಟಿಸುವುದು ತಪ್ಪು. ವಿಶೇಷವಾಗಿ ಅಪರಾಧ ಪ್ರಕರಣಗಳು, ಅತ್ಯಾಚಾರ ಪ್ರಕರಣಗಳು ಅಥವಾ ಸರ್ಕಾರಿ ಯೋಜನೆಗಳ ಕುರಿತ ವರದಿಗಳನ್ನು ನೀಡುವಾಗ ನಿಖರ ಮಾಹಿತಿಯನ್ನು ಸಂಗ್ರಹಿಸುವುದು ಅತ್ಯಗತ್ಯ ಎಂದು ಸಲಹೆ ನೀಡಿದರು. ಎಫ್ಐಆರ್ ಪ್ರತಿಗಳು, ಅಧಿಕೃತ ದಾಖಲೆಗಳು ಹಾಗೂ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ದೊರೆಯುವ ಮಾಹಿತಿಯನ್ನು ಆಧಾರವನ್ನಾಗಿ ಮಾಡಿಕೊಂಡು ವರದಿ ಮಾಡಿದರೆ ಅದು ಹೆಚ್ಚು ನಂಬಿಕಸ್ಥವಾಗುತ್ತದೆ ಎಂದರು.
ಸೋಷಿಯಲ್ ಮೀಡಿಯಾ ಸವಾಲು:
ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣಗಳು ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ನಿಯಂತ್ರಣ ಕಡಿಮೆ ಇರುವುದರಿಂದ ತಪ್ಪು ಮಾಹಿತಿಯ ಹರಡುವಿಕೆ ಹೆಚ್ಚಾಗಿದೆ. ಐಟಿ ಕಾಯ್ದೆಯ ೬೬ಎ ಸೆಕ್ಷನ್ ರದ್ದುಪಡಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಂಬಲ ನೀಡಿದರೂ, ಅದರ ದುರುಪಯೋಗವೂ ಕೆಲವೊಮ್ಮೆ ಕಂಡುಬರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಸ್ಟಿಂಗ್ ಆಪರೇಷನ್ಗಳ ಮೂಲಕ ಅನ್ಯಾಯಗಳನ್ನು ಬಯಲಿಗೆಳೆಯುವುದು ಸಾಧ್ಯ. ಆದರೆ ಅದು ಕಾನೂನುಬದ್ಧ ಮತ್ತು ನೈತಿಕ ಮಿತಿಗಳೊಳಗೆ ನಡೆಯಬೇಕು. ಇಲ್ಲವಾದರೆ ಅದು ತಿರುಗಿ ಕಾನೂನು ಸಮಸ್ಯೆಗಳನ್ನುಂಟುಮಾಡಬಹುದು ಎಂದು ಎಚ್ಚರಿಸಿದರು. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು, ವಕೀಲರು ಸೇರಿದಂತೆ ಹಲವರಲ್ಲಿ ಲೋಕಜ್ಞಾನ ಹಾಗೂ ವಾಸ್ತವಿಕ ಅರಿವು ಕಡಿಮೆಯಾಗುತ್ತಿದೆ ಎಂಬ ಸಾರ್ವಜನಿಕ ಅಭಿಪ್ರಾಯ ಕೇಳಿಬರುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ತಂತ್ರಜ್ಞಾನ ಬೆಳೆದಂತೆ ಜ್ಞಾನವೂ ಹೆಚ್ಚಳವಾಗಬೇಕು; ಆದರೆ ಅದು ಕಾಣಿಸುತ್ತಿಲ್ಲ ಎಂಬುದು ದುಃಖಕರ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಕೆಯೂಡಬ್ಲ್ಯೂಜೆ ಉಪಾಧ್ಯಕ್ಷ ಎಚ್.ಬಿ. ಮದನಗೌಡ ಮಾತನಾಡಿ, ಇಂತಹ ಉಪಯುಕ್ತ ಹಾಗೂ ಜ್ಞಾನವರ್ಧಕ ಕಾರ್ಯಕ್ರಮಗಳು ರಾಜ್ಯದಲ್ಲಿ ವಿರಳವಾಗಿದ್ದು, ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಜೆ.ಆರ್. ಕೆಂಚೇಗೌಡ ಮಾತನಾಡಿ, ವಿದ್ಯಾರ್ಥಿಗಳು ಕಾನೂನು ಅರಿವು ಪಡೆದು ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರಾಗಬೇಕು. ವಿವಿಧ ಕಾನೂನು ಸೆಕ್ಷನ್ಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.
ಸಂಘದ ಕಾರ್ಯದರ್ಶಿ ಕೆ.ಎಂ. ಹರೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ವಕೀಲ ಸೂರ್ಯ ಮುಕುಂದರಾಜ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಾಳುಗೋಪಾಲ್, ಸಾಂಸ್ಕೃತಿಕ ಸಮಿತಿಯ ಚಲಂ ಹಾಡ್ಲಹಳ್ಳಿ, ಹಿಂದೂ ಪ್ರಕಾಶ್, ಮಲ್ಲಿಕಾರ್ಜುನ ಕೊಚ್ಚರಗಿ, ಚೈತ್ರಾ ಮಹಾಲಿಂಗು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
