ರಾಮನಾಥಪುರ, ಏ.6: ಇಲ್ಲಿನ ಕಾವಲಮ್ಮ ದೇವಾಲಯದ ಆವರಣದಲ್ಲಿ ಬನ್ನಿ ಮಂಟಪ ನಿರ್ಮಾಣಕ್ಕೆ ಜಾಗದ ಗುದ್ದಲಿ ಪೂಜೆ ಸೋಮವಾರ ನೆರವೇರಿತು.
ವೇ. ಶ್ರೀ ಶಿವಾನಂದಸ್ವಾಮಿಯವರು ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ರಾಮನಾಥಪುರ ಮತ್ತು ಶಿರದನಹಳ್ಳಿ ನಡುವಿನ ಮುಖ್ಯ ರಸ್ತೆಯಲ್ಲಿ ನೂರಾರು ವರ್ಷಗಳಿಂದ ಇದ್ದ ಬನ್ನಿ ಮಂಟಪವನ್ನು ಇತ್ತೀಚೆಗೆ ರಸ್ತೆ ಅಗಲೀಕರಣ ಕಾಮಗಾರಿಯ ವೇಳೆ ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳು ತೆರವುಗೊಳಿಸಿದ್ದರು. ಬಳಿಕ ಮಂಟಪವನ್ನು ಬೇರೆ ಸ್ಥಳದಲ್ಲಿ ಮರುನಿರ್ಮಿಸಲು ಕೆ.ಆರ್.ಡಿ.ಸಿ.ಎಲ್. ವತಿಯಿಂದ ಜಾಗ ಒದಗಿಸಲಾಗಿತ್ತು.
ಈ ಸಂಬಂಧ ಕ್ಷೇತ್ರದ ಶಾಸಕ ಎ. ಮಂಜು, ದೇವಾಲಯ ಸಮಿತಿ ಸದಸ್ಯರು ಹಾಗೂ ಸಂಬಂಧಿತ ಅಧಿಕಾರಿಗಳು ಸೇರಿ ಕಾವಲಮ್ಮ ದೇವಾಲಯದ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿ, ಬನ್ನಿ ಮಂಟಪ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ನಿಗದಿಪಡಿಸಿದ್ದರು.
ಅದರಂತೆ, ಬನ್ನಿ ಮಂಟಪ ಕಾಮಗಾರಿ ಆರಂಭಿಸುವ ಉದ್ದೇಶದಿಂದ ಸೋಮವಾರ ಜಾಗದ ಪೂಜೆ ಹಾಗೂ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಸದಸ್ಯರಾದ ರಾಮಚಂದ್ರಣ್ಣ, ಎಂ.ಎನ್. ಕುಮಾರಸ್ವಾಮಿ, ಸಿದ್ದರಾಜು, ಕಾವಲಮ್ಮ ದೇವಾಲಯದ ಅರ್ಚಕರಾದ ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಮನಾಥಪುರ ಕಾವಲಮ್ಮ ದೇವಾಲಯದ ಆವರಣದಲ್ಲಿ ಬನ್ನಿ ಮಂಟಪ ನಿರ್ಮಾಣಕ್ಕೆ ಸಹಕರಿಸಿದ ಕ್ಷೇತ್ರದ ಶಾಸಕ ಎ. ಮಂಜು ಹಾಗೂ ಕೆ.ಆರ್.ಡಿ.ಸಿ.ಎಲ್. (AEL) ಇಂಜಿನಿಯರ್ ಶಿವರಾಜು ಅವರಿಗೆ ಬನ್ನಿ ಮಂಟಪ ಹಾಗೂ ದೇವಾಲಯ ಸಮಿತಿಯವರು ಅಭಿನಂದನೆ ಸಲ್ಲಿಸಿದರು.
- ಕುಮಾರಸ್ವಾಮಿ ಎಂ.ಎನ್.
