ಮುಂಬೈ/ಬೆಂಗಳೂರು, ಏಪ್ರಿಲ್ 08: ಕಲಾವಿದ, ಡ್ರಾಗ್ ಪರ್ಫಾರ್ಮರ್ ಹಾಗೂ ಸಕ್ರಿಯ ಕಾರ್ಯಕರ್ತರಾದ ರಾಣಿ ಕೋಹಿನೂರ್ (ಸುಶಾಂತ್ ದಿವ್ಗೀಕರ್) ಅವರು, ಪೂಜಾ ಚೌಧರಿ ಅವರೊಂದಿಗೆ ನಡೆದ ‘ಇನ್ಕಾಂಟ್ರೋವರ್ಸಿಯಲ್’ ಪಾಡ್ಕಾಸ್ಟ್ನಲ್ಲಿ ತೃತೀಯ ಲಿಂಗಿಗಳ ತಿದ್ದುಪಡಿ ಮಸೂದೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಸೂದೆಯನ್ನು ತೀವ್ರವಾಗಿ ಟೀಕಿಸಿದ ಅವರು, “ಈ ಮಸೂದೆ ಸಂಪೂರ್ಣವಾಗಿ ಅಸಂಬದ್ಧವಾಗಿದೆ. ಇದು ನಲ್ಸಾ (NALSA) ತೀರ್ಪು ನಮಗೆ ನೀಡಿದ್ದ ಘನತೆಯನ್ನು ಕಿತ್ತುಕೊಳ್ಳುತ್ತಿದೆ” ಎಂದು ಹೇಳಿದರು. ತೃತೀಯ ಲಿಂಗಿಗಳ ಗುರುತನ್ನು ಘನತೆಯಿಂದ ಮಾನ್ಯ ಮಾಡಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದ್ದರೂ, ಈಗ ಅದೇ ಹಕ್ಕುಗಳನ್ನು ಹಿಂಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
“ನೈಜ ಸಮಸ್ಯೆಗಳನ್ನು ಬಿಟ್ಟು ನಮ್ಮ ದೇಹಗಳ ಬಗ್ಗೆ ಯಾಕೆ ಚಿಂತನೆ?”
ಶಾಸಕರ ಆದ್ಯತೆಗಳನ್ನು ಪ್ರಶ್ನಿಸಿದ ರಾಣಿ ಕೋಹಿನೂರ್, “ನಿಮ್ಮ ಅತ್ಯಾಚಾರ ಕಾನೂನುಗಳನ್ನು ನೀವು ಸರಿಪಡಿಸಿದ್ದೀರಾ? ಮಕ್ಕಳ ಕಳ್ಳಸಾಗಣೆಯನ್ನು ತಡೆದಿದ್ದೀರಾ? ಜನರು ಪ್ರತಿದಿನ ಎದುರಿಸುತ್ತಿರುವ ಅದೆಷ್ಟೋ ನೈಜ ಸಮಸ್ಯೆಗಳಿವೆ. ಅವುಗಳನ್ನು ಬಿಟ್ಟು ನಮ್ಮ ದೇಹಗಳ ಬಗ್ಗೆ ನಿಮಗೆ ಯಾಕಿಷ್ಟು ಚಿಂತೆ?” ಎಂದು ಪ್ರಶ್ನಿಸಿದರು.
ಅವರು ಮತ್ತಷ್ಟು ಮಾತನಾಡಿ, “ಮಹಿಳೆಯರಿಗಾಗಿ, ಲಿಂಗಪರಿವರ್ತಿತರಿಗಾಗಿ ಮತ್ತು ಇಡೀ ಸಮುದಾಯಗಳಿಗಾಗಿ ಕೇವಲ ಪುರುಷರೇ ಕಾನೂನುಗಳನ್ನು ರಚಿಸುತ್ತಿದ್ದಾರೆ. ಇಲ್ಲಿ ನಮ್ಮ ಪ್ರಾತಿನಿಧ್ಯ ಎಲ್ಲಿದೆ? ಕನಿಷ್ಠ ಪಕ್ಷ ಯಾರ ಬಗ್ಗೆ ಕಾನೂನುಗಳನ್ನು ರಚಿಸುತ್ತಿದ್ದೀರೋ, ಆ ಜನರನ್ನು ಸಂಪರ್ಕಿಸಿ. ನಾವು ಆ ಸಂಭಾಷಣೆಯ ಭಾಗವಾಗದೆ ನಮ್ಮ ಅಸ್ತಿತ್ವವನ್ನು ನಿರ್ಧರಿಸಲು ನಿಮಗೆ ಸಾಧ್ಯವಿಲ್ಲ” ಎಂದು ಕಿಡಿಕಾರಿದರು.
ಮನರಂಜನಾ ಕ್ಷೇತ್ರಕ್ಕೂ ಟೀಕೆ
ನೀತಿಗಳ ವಿಚಾರವಷ್ಟೇ ಅಲ್ಲದೆ, ಮನೋರಂಜನಾ ಉದ್ಯಮದ ಮೇಲೂ ರಾಣಿ ಅಸಮಾಧಾನ ವ್ಯಕ್ತಪಡಿಸಿದರು.
“ನಮ್ಮ ಜೀವನದ ಕಥೆಗಳನ್ನು ತೋರಿಸಿ ಲಾಭ ಪಡೆಯುವವರು, ನಿಜ ಜೀವನದಲ್ಲಿ ಬೆಂಬಲ ನೀಡುವ ವಿಷಯ ಬಂದಾಗ ಮೌನಕ್ಕೆ ಶರಣಾಗುತ್ತಾರೆ. ಪರದೆಯ ಮೇಲೆ ನಮ್ಮನ್ನು ಆಚರಿಸುವವರು ವಾಸ್ತವದಲ್ಲಿ ನಮ್ಮನ್ನು ಕೈಬಿಡುತ್ತಾರೆ” ಎಂದು ಟೀಕಿಸಿದರು.
ಬಾತ್ರೂಮ್ನಿಂದ ವೇದಿಕೆಯವರೆಗೆ…
ತಮ್ಮ ವೈಯಕ್ತಿಕ ಪಯಣದ ಬಗ್ಗೆ ಮಾತನಾಡಿದ ಅವರು,
“ಸುತ್ತಲಿನ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಅರಿವಿಲ್ಲದಿದ್ದಾಗ ನಾನು ಬಾತ್ರೂಮ್ನಲ್ಲಿ ಹಾಡಲು ಶುರುಮಾಡಿದೆ. ಅಲ್ಲಿಂದ ಇಂದು ಸಾವಿರಾರು ಜನರ ಮುಂದೆ ಪ್ರದರ್ಶನ ನೀಡುವವರೆಗೆ ಬೆಳೆದಿದ್ದೇನೆ” ಎಂದು ಭಾವುಕರಾದರು.
“ನೀವು ಒಬ್ಬಂಟಿಯಲ್ಲ”
ಕೊನೆಯಲ್ಲಿ ಸಮುದಾಯದ ಸದಸ್ಯರಿಗೆ ಧೈರ್ಯ ತುಂಬಿದ ರಾಣಿ ಕೋಹಿನೂರ್,
“ಯಾರಾದರೂ ತಾವು ಒಬ್ಬಂಟಿ ಎಂದು ಭಾವಿಸಿದರೆ, ನೆನಪಿಡಿ ನೀವು ಒಬ್ಬಂಟಿಯಲ್ಲ. ನಾನು ನಿಮಗಾಗಿ ನಿಲ್ಲುತ್ತೇನೆ. ಯಾವುದೇ ನೀತಿ, ಮಸೂದೆ ಅಥವಾ ವ್ಯವಸ್ಥೆಯು ನೀವು ಯಾರು ಎಂಬುದನ್ನು ಅಳಿಸಲು ಸಾಧ್ಯವಿಲ್ಲ” ಎಂದು ಭರವಸೆ ನೀಡಿದರು.
