ರಾಮನಾಥಪುರ, ಏಪ್ರಿಲ್ 8 (ಆರ್ಎನ್ಪಿ): ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಅರಕಲಗೂಡು ತಾಲೂಕು ತಹಸಿಲ್ದಾರ್ ಕೆ.ಸಿ. ಸೌಮ್ಯ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸಿದರು.
ಪ್ರತಿಭಟನಾಕಾರರೊಂದಿಗೆ ಮಾತನಾಡಿದ ತಹಸಿಲ್ದಾರ್ ಸೌಮ್ಯ ಅವರು, ಈ ಕ್ಷೇತ್ರದ ಶಾಸಕ ಎ. ಮಂಜು ಅವರ ಅಧ್ಯಕ್ಷತೆಯಲ್ಲಿ ಹಾಸನ ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳು, ತಂಬಾಕು ಮಂಡಳಿಯ ಅಧಿಕಾರಿಗಳು ಹಾಗೂ ತಂಬಾಕು ಖರೀದಿ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸುವ ಸಭೆಯನ್ನು ಏಪ್ರಿಲ್ 15ರೊಳಗೆ ಕರೆಯಲಾಗುವುದು ಎಂದು ಭರವಸೆ ನೀಡಿದರು.
ಈ ಭರವಸೆಯ ಹಿನ್ನೆಲೆಯಲ್ಲಿ ತಂಬಾಕು ರೈತ ಸಂಘ ಹಾಗೂ ತಂಬಾಕು ಬೆಳೆಗಾರರು ತಮ್ಮ ಧರಣಿಯನ್ನು ವಾಪಸ್ ಪಡೆದರು.
ಈ ಸಂದರ್ಭದಲ್ಲಿ ರೈತ ಸಂಘದ ಗೌರವಾಧ್ಯಕ್ಷ ಸೀಬಹಳ್ಳಿ ಯೋಗಣ್ಣ ಮಾತನಾಡಿ, ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.

ಅವರು ಹೇಳುವಂತೆ, ಆರಂಭದಲ್ಲಿ ಕಂಪನಿಗಳು ಪ್ರತಿ ಕೆ.ಜಿ. ತಂಬಾಕಿಗೆ ₹300 ರಿಂದ ₹340ರವರೆಗೆ ದರ ನೀಡುತ್ತಿದ್ದು, ಈಗ ಅದೇ ತಂಬಾಕಿಗೆ ₹250 ರಿಂದ ₹300 ಮಾತ್ರ ನೀಡಲಾಗುತ್ತಿದೆ. ಬ್ಯಾಂಕ್ ಸಾಲ, ಮನೆ ವಡವೆ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಿ ತಂಬಾಕು ಬೆಳೆದಿರುವ ರೈತರಿಗೆ ಈ ದರ ಕುಸಿತ ಭಾರೀ ನಷ್ಟ ಉಂಟುಮಾಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ಹಾಗೂ ನಷ್ಟ ಪರಿಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭಾರತೀಯ ರೈತ ಸಂಘದ ಅಧ್ಯಕ್ಷ ಬಂಡಿಗನಹಳ್ಳಿ ರವಿ, ಉಪಾಧ್ಯಕ್ಷ ಮಂಜೇಗೌಡ, ಹರಳಹಳ್ಳಿ ತಮ್ಮೇಗೌಡ, ಸಂಜು, ಜಗದೀಶ್, ರಮೇಶ್, ದೋರೆ, ವೇದಾನಂದ, ವೀರೇಂದ್ರ, ತಂಬಾಕು ಮಂಡಳಿ ಹರಾಜು ಅಧೀಕ್ಷಕಿ ಸವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಅರಕಲಗೂಡು ವೃತ್ತ ನಿರೀಕ್ಷಕ ವಸಂತ್ ಕುಮಾರ್, ಕೊಣನೂರು ಠಾಣೆ ಪಿಎಸ್ಐ ಆರ್. ಮರಿಯಪ್ಪ ಬ್ಯಾಳಿ ಹಾಗೂ ಸಿಬ್ಬಂದಿ ಬಂದುಬಸ್ತು ವ್ಯವಸ್ಥೆ ಮಾಡಿದ್ದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
