ಹಾಸನ, ಏ. 9: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕರ್ನಾಟಕ ವತಿಯಿಂದ ಆಯೋಜಿಸಲಿರುವ “ಸೃಷ್ಟಿ ಇನ್ನೋವೇಶನ್ ಎಕ್ಸ್ಚೇಂಜ್–2026” ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಇಂದು ಹಾಸನದಲ್ಲಿ ನಡೆಯಿತು.
ಧಾರವಾಡದ ಎಸ್ಡಿಎಂ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಏಪ್ರಿಲ್ 28ರಿಂದ 30ರವರೆಗೆ ನಡೆಯಲಿರುವ ಈ ರಾಜ್ಯಮಟ್ಟದ ಕಾರ್ಯಕ್ರಮದ ಅಂಗವಾಗಿ, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಮರೇಂದ್ರ ಹೆಚ್. ಜೆ. ಹಾಗೂ ಹಾಸನ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದವರು, ಇಂತಹ ಹೊಸತನ ಮತ್ತು ತಾಂತ್ರಿಕ ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಂಶೋಧನಾ ಮನೋಭಾವ ಮತ್ತು ತಾಂತ್ರಿಕ ಅರಿವು ಬೆಳೆಸಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಭಾಗ ಸಂಚಾಲಕರಾದ ರವಿ ಇರೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮಮತ ಚೌದರಿ ಹಾಗೂ ವರುಣ್ ಪುರಾಣಿಕ್ ಉಪಸ್ಥಿತರಿದ್ದರು.
“ಸೃಷ್ಟಿ ಇನ್ನೋವೇಶನ್ ಎಕ್ಸ್ಚೇಂಜ್–2026” ಕಾರ್ಯಕ್ರಮವು ವಿದ್ಯಾರ್ಥಿಗಳ ಆವಿಷ್ಕಾರ, ಸಂಶೋಧನೆ ಮತ್ತು ತಾಂತ್ರಿಕ ವಿನಿಮಯಕ್ಕೆ ವೇದಿಕೆಯಾಗಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.
– ಶಿವಕುಮಾರ್ ಕಟ್ಟಾಯ.
