ತುಮಕೂರು : ಬಿಜೆಪಿ ಹಾಗೂ ಆರ್ಎಸ್ಎಸ್ ವಿಷಸರ್ಪ ಇದ್ದಂತೆ ಎಂದು ಹೇಳಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು ಹೇಳಿಕೆ ಹಿಂಪಡೆಯಲು ಒತ್ತಾಯಿಸಿದರು.
ಬಿಜಿಎಸ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ, ಆರ್ಎಸ್ಎಸ್ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿರುವುದು ಮಲ್ಲಿಕಾರ್ಜುನಖರ್ಗೆ ಅವರಿಗೆ ಶೋಭೆಯಲ್ಲ.ದೇಶ ಮೊದಲು ಆಮೇಲೆ ಪಕ್ಷ ಹಾಗೂ ವ್ಯಕ್ತಿ ಎಂಬ ಧ್ಯೇಯದ ಆರ್ಎಸ್ಎಸ್ ಮಾರ್ಗದರ್ಶನದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ.ಶಾಂತಿಪ್ರಿಯತೆಗೆ ಹೆಸರಾದ ಬೌದ್ಧಧರ್ಮ ಪ್ರತಿಪಾದಿಸುವ ಖರ್ಗೆಯವರು, ಅಲ್ಪಸಂಖ್ಯಾತರನ್ನು ಹಿಂದೂಗಳ ಮೇಲೆ ಎತ್ತಿಕಟ್ಟುವ ಮಾತುಗಳು ಆಕ್ಷೇಪಾರ್ಹ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ನಾಯಕರು ಡಿಐಜಿ ಭೇಟಿ ಮಾಡಿದ್ದಾರೆ.ಖರ್ಗೆ ಅವರ ಮಾತುಗಳನ್ನು ಉಗ್ರವಾಗಿ ಖಂಡಿಸುತ್ತೇವೆ, ಅವರುತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಇಂದು ದೇಶದೇಶಗಳ ನಡುವೆ ಯುದ್ಧ ನಡೆಯುತ್ತಿದೆ.ಭಾರತ ಉಳಿದಿದೆಯೆಂದರೆ ಅದು ಆರ್ಎಸ್ಎಸ್ ಹಾಕಿಕೊಟ್ಟ ಮಾರ್ಗದರ್ಶನ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಮಾತ್ರ. ಬೇರೆ ಪಕ್ಷಗಳಾಗಿದ್ದರೆ ಅಧಿಕಾರಕ್ಕೋಸ್ಕರ ದೇಶದ ಭದ್ರತೆಯನ್ನೂ ಕಡೆಗಣಿಸುತ್ತಿದ್ದವು.ಆರ್ಎಸ್ಎಸ್ ಹಾಕಿಕೊಟ್ಟ ಬುನಾದಿಯ ಆಡಳಿತದಲ್ಲಿ ಇಂದು ನಮ್ಮದೇಶ ಸುಭದ್ರವಾಗಿದೆ.ಅದನ್ನು ಸಹಿಸಲಾಗದೆ ಮಲ್ಲಿಕಾರ್ಜುನಖರ್ಗೆಯವವರು ದೇಶ ಒಡೆಯುವ ಹೇಳಿಕೆ ನೀಡಿರುವುದು ಖಂಡನೀಯ.ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಜ್ಯೋತಿಗಣೇಶ್ ಒತ್ತಾಯಿಸಿದರು.
ಅಂಬಿಕಾ ಹುಲಿನಾಯ್ಕರ್, ಟಿ.ಹೆಚ್. ಹನುಮಂತರಾಜು, ಜಿ ನವಚೇತನ್, ಕೆ.ವೇದಮೂರ್ತಿ, ಟಿ.ಆರ್. ಸದಾಶಿವಯ್ಯ, ವಿಷ್ಣುವರ್ಧನ್, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಇಂದ್ರಕುಮಾರ್, ಮಹೇಶ್ಬಾಬು, ಬಂಬೂ ಮೋಹನ್, ಜೆ.ಜಗದೀಶ್, ಕೊಪ್ಪಲ್ ನಾಗರಾಜು, ರೇಖಾ ಶಿವಕುಮಾರ್, ಮರಿತಿಮ್ಮಯ್ಯ, ಆಟೋಯಡಿಯೂರಪ್ಪ, ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
