ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಆಹಿತಕರ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ.ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಉದ್ದೇಶ ಪೂರ್ವಕವಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಕೆಟ್ಟ ಹೆಸರು ತರಲು ಇಲ್ಲಸಲ್ಲದ ಆರೋಪ ಮಾಡುತಿದ್ದು,ಮುಂದವರೆದರೆ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ್ಗೌಡ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 08 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3:30 ರವರೆಗೆ ಸುಮಾರು 750ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ,ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಒದಗಿಸುವ ಕೆಲಸ ಮಾಡಿದ್ದಾರೆ.ಆದರೆ ಕೊನೆಯಲ್ಲಿ ಬಂದ ಕೆ.ಆರ್.ಎಸ್ ಪಕ್ಷದ ಕೆಲವರು ಉದ್ದೇಶಪೂರ್ವಕವಾಗಿಯೇ ಸಚಿವರನ್ನು ಕೆರಳಿಸುವಂತೆ ಪ್ರಶ್ನೆ ಮಾಡಿದಲ್ಲದೆ,ಅರ್ಜಿ ಪಡೆದ ಸಂಬಂಧಪಟ್ಟವರಿಗೆ ನೀಡಿದ ನಂತರ ಹೊರಡಲು ಮುಂದಾದಾಗ ಉಢಾಪೆಯಾಗಿ ವರ್ತಿಸಿ,ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ. ಇದು ಖಂಡನೀಯ.ಅಲ್ಲದೆ ಸೋಷಿಯಲ್ ಮಿಡಿಯಾದಲ್ಲಿ ಇಲ್ಲಸಲ್ಲದ ಸುಳ್ಳು ಹೇಳಿ ಮನಬಂದಂತೆ ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೆ.ಆರ್.ಎಸ್ ಪಕ್ಷದವರ ನಡವಳಿಕೆ ಇದೇ ರೀತಿ ಮುಂದುವರೆದರೆ ನಾವು ಕೂಡ ಎಲ್ಲೆಂದರಲ್ಲಿ ಕೆ.ಆರ್.ಎಸ್.ಪಕ್ಷದವರಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡರರಾದ ಇಕ್ಬಾಲ್ ಅಹಮದ್ ಮಾತನಾಡಿ,ಪ್ರಜಾಪ್ರಭುತ್ವದ ಅಡಿಯಲ್ಲಿ ಸರಕಾರದ ಸವಲತ್ತುಗಳಿಗೆ ಅರ್ಜಿ ಸಲ್ಲಿಸಲು ಎಲ್ಲರಿಗೂ ಅವಕಾಶವಿದೆ.ಆದರೆ ಕೆ.ಆರ್.ಎಸ್ ಪಕ್ಷದವರು ಉದ್ದೇಶ ಪೂರ್ವಕವಾಗಿಯೇ ಮೊಬೈಲ್ ಹಿಡಿದು,ಬೇಕಾಬಿಟ್ಟಿ ಮಾತನಾಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.ಕಾನೂನಿನ ಅಡಿಯಲ್ಲಿ ಎಲ್ಲರಿಗೂ ಸಮಸ್ಯೆ ಪರಿಹಾರಕ್ಕೆ ಅವಕಾಶವಿದೆ. ಆದರೆ ಕೆ.ಆರ್.ಎಸ್ ಪಕ್ಷದ ದುಂಡಾವರ್ತನೆಯನ್ನು ಸಹಿಸುವುದಿಲ್ಲ.ನಮ್ಮ ಪಕ್ಷಕ್ಕೆ 140 ವರ್ಷಗಳ ಇತಿಹಾಸವಿದೆ. ಲಕ್ಷಾಂತರ ಕಾರ್ಯಕರ್ತರಿದ್ದೇವೆ, ತಕ್ಕ ಪಾಠ ಕಲಿಸುವುದು ಅನಿವಾರ್ಯ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸರಕಾರದ ಕೆಲಸವಾಗಿರುವ ಜನಸಂಪರ್ಕ ಸಭೆ ವ್ಯವಸ್ಥಿತವಾಗಿ ನಡೆಯುತ್ತಿರುವ ಸಂದರ್ಭದಲ್ಲಿ 750 ಜನರಿಗೆ ಆಗದ ತೊಂದರೆ ಇವರಿಗೆ ಮಾತ್ರ ಆಗಿತ್ತೇ? ಕೆ.ಆರ್.ಎಸ್ ಪಕ್ಷದ್ದು ಕೇವಲ ಗಿಮಿಕ್, ಮುಖ್ಯಮಂತ್ರಿಗಳ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಸಚಿವರು, ಕಾರ್ಮಿಕ ಸಚಿವರು ಎಲ್ಲರ ಜನಸ್ಪಂದನ ಸಭೆಯಲ್ಲಿಯು ಇದೇ ರೀತಿ ವರ್ತಿಸುತಿದ್ದಾರೆ.ಅರ್ಜಿ ನೀಡುವ ಬದಲು ವಿಡಿಯೋ ಮಾಡಿ ಸೋಷಿಯೆಲ್ ಮಿಡಿಯಾದಲ್ಲಿ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಮಕೃಷ್ಣ,ಸುವರ್ಣಮ್ಮ, ಹೆಚ್.ಸಿ.ಹನುಮಂತಯ್ಯ, ರೇವಣ್ಣಸಿದ್ದಯ್ಯ ಇರ್ಫಾನ್ ಅಹಮದ್, ನಿಂಗರಾಜು, ಮೆಸ್ ಮಹೇಶ್, ಫೈಯಾಜ್, ನಾಗಲಕ್ಷ್ಮಿ, ವಿಜಯಲಕ್ಷ್ಮಿ,ಜಿಲ್ಲಾ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತ, ಪಿ.ಶಿವಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
