ರಾಮನಾಥಪುರ: ಇಂದಿನ ಕಲಿಯುಗದಲ್ಲಿ ಒಮ್ಮೆ “ಶ್ರೀರಾಮ” ಎಂದು ಭಕ್ತಿಯಿಂದ ಉಚ್ಚರಿಸಿದರೆ ಸಾಕು, ದೇವರ ಅನುಗ್ರಹ ದೊರೆಯುತ್ತದೆ. ಮಾನವರು ಪರಮಾತ್ಮನನ್ನು ಅರಿತು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ರಾಮನಾಥಪುರದ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರಾದ ವೇ. ಕನಕಾಚಾರ್ಯರು ಹೇಳಿದರು.

ಗುರುವಾರ ಮಠದ ದೇವಾಲಯ ಸಭಾಂಗಣದಲ್ಲಿ ನಡೆದ ಉತ್ಸವ ಹಾಗೂ ವಿಶೇಷ ಪೂಜೆಯ ಬಳಿಕ ಆಶೀರ್ವಚನ ನೀಡಿದ ಅವರು, ಮಾನವ ಜೀವನದ ಮೌಲ್ಯಗಳನ್ನು ನೆನಪಿಸಿದರು.
“ಲಂಚ ಗೌರವವನ್ನು ಹಾಳುಮಾಡುತ್ತದೆ, ಕ್ರೋಧ ಬುದ್ಧಿಯನ್ನು ನಾಶಮಾಡುತ್ತದೆ, ಚಿಂತೆ ಆಯುಷ್ಯವನ್ನು ಕಡಿಮೆ ಮಾಡುತ್ತದೆ, ಅಹಂಕಾರ ಜ್ಞಾನವನ್ನು ನಾಶಮಾಡುತ್ತದೆ, ಪ್ರಾಯಶ್ಚಿತ್ತ ಪಾಪವನ್ನು ದೂರ ಮಾಡುತ್ತದೆ, ಮೋಹ ಮರ್ಯಾದೆಯನ್ನು ಹಾಳುಮಾಡುತ್ತದೆ” ಎಂದು ಹೇಳಿದರು.

ಅದೇ ರೀತಿ,
ಗೌರವವಿಲ್ಲದ ರೂಪ ವ್ಯರ್ಥ, ಗುರಿಯಿಲ್ಲದ ಸಾಧನೆ ಅರ್ಥಹೀನ, ನಮ್ರತೆಯಿಲ್ಲದ ಪ್ರತಿಭೆ ವ್ಯರ್ಥ, ಉಪಯೋಗಿಸದ ಧನ ಅರ್ಥವಿಲ್ಲದದು, ಹಸಿವಿಲ್ಲದ ಭೋಜನ ವ್ಯರ್ಥ, ಪರಮಾತ್ಮನ ಅರಿವಿಲ್ಲದ ಜೀವನವೇ ವ್ಯರ್ಥ ಎಂದು ಅವರು ತಿಳಿಸಿದರು.
ಪೂಜಾ ಕೈಂಕರ್ಯ ಹಾಗೂ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
