ಹಾಸನ, ಏಪ್ರಿಲ್ 17: ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್ (ರಿ), ವಿವಿಧ ಕಸುಬುದಾರರ ಕಾರ್ಮಿಕ ಸಂಘ (ರಿ) ಹಾಗೂ ಆಲೀವ್ ಗಾರ್ಡನ್ ಚಾರಿಟಬಲ್ ಟ್ರಸ್ಟ್ (ರಿ)ಗಳ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 19ರಂದು ನಗರದಲ್ಲಿ ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಹಾಗೂ ವಿವಿಧ ಸಾಮಾಜಿಕ–ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಎಸ್.ವಿ. ರಂಗಣ್ಣ ರಸ್ತೆಯಲ್ಲಿರುವ ಶಾಸ್ತಾ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಸಂಸ್ಥಾಪಕ ರಾಜ್ಯಾಧ್ಯಕ್ಷ ರವಿತೇಜ ಟಿ.ಜೆ., ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಜನ್ಮ ಜಯಂತಿ ಹಾಗೂ ಬಸವ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಗೌರವ ಉಪಸ್ಥಿತಿಯಾಗಿ H. D. Deve Gowda ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಡಾ. ವಿ. ಮಂಜುನಾಥ್ ವಹಿಸಲಿದ್ದಾರೆ. ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ. ನಂ. ಲೋಕೇಶ್ ನುಡಿಯಲಿದ್ದು, ಶ್ರೀ ಕ್ಷೇತ್ರ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಜು ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಮುಖ್ಯಸ್ಥರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಭರತನಾಟ್ಯ ಪ್ರದರ್ಶನ, ಜಾನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ ಅನ್ನಸಂತರ್ಪಣೆ, ಪ್ರಶಸ್ತಿ ವಿತರಣೆ, ಪುಸ್ತಕ ಬಹುಮಾನ ವಿತರಣೆ, ಶಾಲಾ ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ, ಬಡವರಿಗೆ ದಿನಸಿ ಕಿಟ್ಗಳ ವಿತರಣೆ, ಅಂಗವಿಕಲರಿಗೆ ವೀಲ್ಚೇರ್ ಹಾಗೂ ವೃದ್ಧರು ಮತ್ತು ಅನಾಥರಿಗೆ ಬೆಡ್ಶೀಟ್ಗಳ ವಿತರಣೆ ನಡೆಯಲಿದೆ ಎಂದು ಆಲೀವ್ ಗಾರ್ಡನ್ ಚಾರಿಟಬಲ್ ಟ್ರಸ್ಟ್ ರಾಜ್ಯಾಧ್ಯಕ್ಷ ಡಾ. ಐ.ಎಚ್. ಲೋಕೇಶ್ ತಿಳಿಸಿದ್ದಾರೆ.
ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆಯನ್ನು ಪೂರ್ಣಿಮಾ ಹಾಸನ, ಕಿರಣಕುಮಾರ್ ಮತ್ತು ಮಲ್ಲೇಶ್ ಜೆ ವಹಿಸಲಿದ್ದು, ರಾಜ್ಯ ಮಹಿಳಾ ಅಧ್ಯಕ್ಷೆ ಸುನಿತಾ ಮಂಜುನಾಥ್ ಮಾಹಿತಿ ನೀಡಿದರು.
ಸಭೆಯಲ್ಲಿ ತುಳಸೀದಾಸ್, ವೇಣುಕುಮಾರ್, ಲಕ್ಷ್ಮಣ್, ಮಂಜುನಾಥ್, ರಘು, ಸಾವಿತ್ರಿ ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
