ಹಾಸನ: ನಾರಿಶಕ್ತಿ ವಂದನ್ ಅಧಿನಿಯಮ–2026 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಏಪ್ರಿಲ್ 19ರಂದು ಹಾಸನ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಶಿಲ್ಪಾ ಜಿ ಸುವರ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಿಶಕ್ತಿ ವಂದನ್ ಕಾಯ್ದೆ ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದ್ದು, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದ ಮೀಸಲಾತಿ ನೀಡುವ ಮೂಲಕ ಮಹಿಳೆಯರ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.
ಮಹಿಳೆಯರ ನೇತೃತ್ವದ ಅಭಿವೃದ್ಧಿಯು ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ತರಲಿದೆ. ಪ್ರಧಾನಿ Narendra Modi ಅವರ ನೇತೃತ್ವದಲ್ಲಿ ಕಳೆದ ದಶಕದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ‘ಬೇಟಿ ಬಚಾವೋ, ಬೇಟಿ ಪಢಾವೋ’, ‘ಸುಕನ್ಯಾ ಸಮೃದ್ಧಿ’, ‘ಪೋಷಣ್ 2.0’ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ವಿಶೇಷ ಒತ್ತು ನೀಡಲಾಗಿದ್ದು, ಮುದ್ರಾ ಸಾಲ, ಸ್ಟ್ಯಾಂಡ್ ಅಪ್ ಇಂಡಿಯಾ, ಉಜ್ವಲ ಯೋಜನೆ, ಜಲ ಜೀವನ ಮಿಷನ್ ಮೊದಲಾದ ಯೋಜನೆಗಳಿಂದ ಮಹಿಳೆಯರ ಜೀವನಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. STEM ಕ್ಷೇತ್ರದಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆ ಎಂದರು.
ಈ ಕಾಯ್ದೆ ಜಾರಿಯಾಗಲು ಹಲವು ವರ್ಷಗಳ ನಿರೀಕ್ಷೆ ಇದ್ದು, ಇದೀಗ ಅದು ಸಾಕಾರವಾಗುತ್ತಿರುವುದು ಸಂತಸದ ಸಂಗತಿ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೈಕ್ ರ್ಯಾಲಿ, ಮಹಿಳಾ ಸಮಾವೇಶ, ಸಹಿ ಸಂಗ್ರಹ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೇತ್ರಾವತಿ, ರತ್ನ ಪ್ರಕಾಶ್, ಛಾಯಾ ಕೃಷ್ಣ, ವೇದಾವತಿ ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಮೋಹನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
