ಕೊರಟಗೆರೆ :- ಪಟ್ಟಣದ ಸಮೀಪದ ಗೌಡನಕೆರೆ ಪಕ್ಕದ ರೈತರ ಜಮೀನುಗಳಲ್ಲಿ ಗುರುವಾರ ಬೆಳಗ್ಗೆ ಹುಚ್ಚು ಕರಡಿಯೊಂದು ಆರ್ಭಟ ನಡೆಸಿ ಭೀತಿ ಮೂಡಿಸಿದ ಘಟನೆ ನಡೆದಿದೆ.
ಬೆಳಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ಎಂದಿನಂತೆ ಜಮೀನಿಗೆ ತೆರಳಿದ್ದ ರೈತರು ಕರಡಿಯ ಅಟ್ಟಹಾಸವನ್ನು ಕಂಡು ಗಾಬರಿಗೊಂಡು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದೆ.
ಕ
ಕರಡಿ ದಾಳಿ ವೇಳೆ ಅರಣ್ಯ ಇಲಾಖೆಯ ವಾಹನದ ಮೇಲೆ ಹಾರಿದ ಕರಡಿ, ತನ್ನ ಚೂಪಾದ ಉಗುರುಗಳು ಹಾಗೂ ಬಾಯಿಂದ ವಾಹನದ ಟೈರ್ಗಳನ್ನು ಕಿತ್ತು ಹಾಕಲು ಪ್ರಯತ್ನಿಸಿದೆ. ಈ ಸಂದರ್ಭ ವಾಹನದಲ್ಲೇ ಕುಳಿತಿದ್ದ ಸಿಬ್ಬಂದಿಗಳು ಕೆಲಕಾಲ ಆತಂಕದಲ್ಲಿ ಕಳೆದರೂ, ಕರಡಿ ಸ್ಥಳ ಬದಲಾಯಿಸಿದ ಬಳಿಕ ಸುರಕ್ಷಿತವಾಗಿ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಂತರ ಕರಡಿಯನ್ನು ನಿಯಂತ್ರಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನ ನಡೆಸಿ, ಕೊನೆಗೂ ಸಮೀಪದ ಶೆಡ್ ಒಂದರಲ್ಲಿ ಕರಡಿಯನ್ನು ಕೂಡಿಹಾಕುವಲ್ಲಿ ಯಶಸ್ವಿಯಾದರು. ಬಳಿಕ ಅರವಳಿಕೆ ತಜ್ಞರು ಬಂದೂಕಿನಿಂದ ಚುಚ್ಚುಮದ್ದು ನೀಡಿ ಶಾಂತಗೊಳಿಸಲು ಮುಂದಾದರು.
ಆದರೆ, ಚುಚ್ಚುಮದ್ದು ನೀಡಿದ ನಂತರ ಸುಮಾರು ಹತ್ತು ನಿಮಿಷಗಳಲ್ಲಿ ಪರಿಶೀಲಿಸಿದಾಗ, ಕರಡಿ ಅದಕ್ಕೂ ಮುನ್ನವೇ ಮೃತಪಟ್ಟಿರುವುದು ತಿಳಿದುಬಂದಿದೆ. ಸುಮಾರು ಒಂದು ಗಂಟೆ ಹಿಂದೆಯೇ ಕರಡಿಗೆ ಹುಚ್ಚು ಲಕ್ಷಣಗಳು ಕಾಣಿಸಿಕೊಂಡಿದ್ದು, ಅದೇ ಕಾರಣದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅರವಳಿಕೆ ತಜ್ಞರು ಹಾಗೂ ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ನಂತರ ಸ್ಥಳೀಯ ಪಶುವೈದ್ಯಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಅರವಳಿಕೆ ತಜ್ಞರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಮರಣ ಪರೀಕ್ಷೆಯ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸ್ಥಳಕ್ಕೆ ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಅರಣ್ಯ ಇಲಾಖೆಯ ಡಿಎಫ್ಒ ಶಶಿಧರ್, ಎಸಿಎಫ್ ಮಲ್ಲಿಕಾರ್ಜುನ್, ಮಧುಗಿರಿ ಆರ್ ಎಫ್ ಓ ಸುರೇಶ್, ಕೊರಟಗೆರೆ ಆರ್ಎಫ್ಒ ಹನುಮಂತರಾಜು, ಉಪವಲಯ ಅರಣ್ಯ ಅಧಿಕಾರಿ ದಿಲೀಪ್ ಕುಮಾರ್, ಅರಣ್ಯಪಾಲಕ ಮಂಜುನಾಥ್ , ರಾಜಣ್ಣ ನರಸರಾಜು ಗಂಗರಾಜು, ನರಸಿಂಹಮೂರ್ತಿ,ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶ್ರೀನಿವಾಸ್ ಕೊರಟಗೆರೆ.
