ರಾಮನಾಥಪುರ:
ದಕ್ಷಿಣಕಾಶಿ ಎಂದೇ ಖ್ಯಾತಿ ಪಡೆದಿರುವ ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರದಲ್ಲಿ ಶ್ರೀ ಪಟ್ಟಾಭಿರಾಮಸ್ವಾಮಿ ಬ್ರಹ್ಮರಥೋತ್ಸವವು ಏಪ್ರಿಲ್ 21ರಂದು ಮಂಗಳವಾರ ಜರುಗಲಿದೆ.
ಈ ಪ್ರಯುಕ್ತ ಪಟ್ಟಣದ ರಾಜಬೀದಿಯಲ್ಲಿ ನಡೆದ ಶೇಷವಾಹನೋತ್ಸವದಲ್ಲಿ ಮೈಸೂರು ವೇದಿಕ ಕಲಾವಿದ ಕೃಷ್ಣಮೂರ್ತಿ ಹಾಗೂ ಸಂಗಡಿಗರು ಮಂಗಳವಾದ್ಯವನ್ನು ಅಮೋಘವಾಗಿ ನಡೆಸಿಕೊಟ್ಟು ಭಕ್ತರನ್ನು ಮೆಚ್ಚಿಸಿದರು.
ಬ್ರಹ್ಮರಥೋತ್ಸವದ ಅಂಗವಾಗಿ ಏಪ್ರಿಲ್ 21ರಿಂದ 25ರವರೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆಗಳು, ವಿವಿಧ ಉತ್ಸವಗಳು ನಡೆಯಲಿವೆ ಎಂದು ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಆರ್.ಆರ್. ಶ್ರೀನಿವಾಸ ತಿಳಿಸಿದ್ದಾರೆ.

ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯವು ತನ್ನ ವೈಶಿಷ್ಟ್ಯದಿಂದಲೇ ಪ್ರಸಿದ್ಧವಾಗಿದೆ. ಇಲ್ಲಿ ಪಟ್ಟಾಭಿಷಿಕ್ತನಾದ ಶ್ರೀರಾಮನು ತನ್ನ ತೊಡೆಯ ಮೇಲೆ ಸೀತಾಮಾತೆಯನ್ನು ಕುಳ್ಳಿಸಿಕೊಂಡಿರುವ ಅಪೂರ್ವ ಭಂಗಿ ದರ್ಶನವಾಗುವುದು ವಿಶೇಷ. ಇಂತಹ ರೂಪವು ದೇಶದಲ್ಲೇ ಅಪರೂಪವಾಗಿದ್ದು, ರಾಮನಾಥಪುರ ಕ್ಷೇತ್ರಕ್ಕೆ ವಿಶೇಷ ಮಹಿಮೆ ತಂದಿದೆ.
ಇತಿಹಾಸದ ಪ್ರಕಾರ, ಸೌಭರಿ ಮಹರ್ಷಿಗಳು ಇಲ್ಲಿ ಜಪತಪಗಳನ್ನು ನೆರವೇರಿಸಿ, ಕಾವೇರಿ ಉತ್ತರ ದಂಡೆಯ ಮೇಲೆ ಶ್ರೀರಾಮ, ಸೀತಾ, ಲಕ್ಷ್ಮಣ, ಭರತ, ಶತ್ರುಘ್ನ ಹಾಗೂ ಹನುಮಂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ವಿಜಯನಗರ ಕಾಲದಲ್ಲಿ ನಿರ್ಮಿತವಾಗಿರಬಹುದಾದ ಈ ದೇವಾಲಯ ದ್ರಾವಿಡ ಶೈಲಿಯಲ್ಲಿ ಕಂಗೊಳಿಸುತ್ತಿದೆ.
ಇಲ್ಲಿ ನಡೆಯುವ ರಾಮೋತ್ಸವ, ಕೊಠಾರೋತ್ಸವ, ಪುಷ್ಪಬೃಂದಾವನೋತ್ಸವ ಹಾಗೂ ಸಂಗೀತೋತ್ಸವಗಳಲ್ಲಿ ದೇವರ ಅಲಂಕಾರ ವೈಭವ ಭಕ್ತರನ್ನು ಆಕರ್ಷಿಸುತ್ತದೆ.
ಪವಿತ್ರ ಕ್ಷೇತ್ರವಾದ ರಾಮನಾಥಪುರದಲ್ಲಿ ಗಾಯತ್ರಿಶಿಲೆ, ಗೋಗರ್ಭ, ಕುಮಾರಧಾರ ತೀರ್ಥಗಳ ಜೊತೆಗೆ ಶ್ರೀ ರಾಮೇಶ್ವರಸ್ವಾಮಿ, ಅಗಸ್ತೇಶ್ವರಸ್ವಾಮಿ, ಕಾವೇರಿ ಅಮ್ಮ, ಸುಬ್ರಹ್ಮಣ್ಯಸ್ವಾಮಿ, ಲಕ್ಷ್ಮೀನರಸಿಂಹಸ್ವಾಮಿ ಸೇರಿದಂತೆ ಹತ್ತಾರು ದೇವಾಲಯಗಳು ಇದ್ದು, ಈ ಕ್ಷೇತ್ರದ ಧಾರ್ಮಿಕ ಮಹತ್ವವನ್ನು ಹೆಚ್ಚಿಸಿವೆ.
ವರದಿ: ಕುಮಾರಸ್ವಾಮಿ, ರಾಮನಾಥಪುರ
