ಹಾಸನ, ಏಪ್ರಿಲ್ 21: ಸಮಾಜದಲ್ಲಿ ಸರ್ವರಿಗೂ ಸಮಾನತೆ ದೊರಕಬೇಕು ಎಂಬುದು ದಾರ್ಶನಿಕರ ಆಶಯವಾಗಿದ್ದು, ಸದೃಢ ಸಮಾಜ ನಿರ್ಮಾಣಕ್ಕೆ ಅದು ಅತ್ಯಾವಶ್ಯಕ ಎಂದು ಉದಯ ವರದಿ ಸಂಪಾದಕರು ಹಾಗೂ ಹಿರಿಯ ಪತ್ರಕರ್ತ ವೆಂಕಟೇಶ್ ಹೇಳಿದರು.
ನಗರದಲ್ಲಿ ಹಾಸನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ, ಉದಯ ವರದಿ ಪತ್ರಿಕೆ ಹಾಗೂ ಮಹಿಳಾ ಕದಳಿ ವೇದಿಕೆ ವತಿಯಿಂದ ಏರ್ಪಡಿಸಿದ್ದ ಉಚಿತ ಬೇಸಿಗೆ ಶಿಬಿರ ಮತ್ತು ಬಸವಣ್ಣ ಜಯಂತಿ ಅಂಗವಾಗಿ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಚನಗಾಯನ, ವೇಷಭೂಷಣ ಹಾಗೂ ಪ್ರಬಂಧ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

“ಜಗಜ್ಯೋತಿ ಬಸವಣ್ಣವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಸಮಾನತೆ, ಮೇಲು-ಕೀಳು ಭಾವನೆ ನಿವಾರಣೆ ಮತ್ತು ಕಾಯಕ ಜೀವನದ ಮಹತ್ವವನ್ನು ಸಾರಿದ್ದಾರೆ. ಮಕ್ಕಳು ಸುಸಂಸ್ಕೃತರಾಗಲು ಇಂತಹ ಸ್ಪರ್ಧೆಗಳು ಮತ್ತು ಜ್ಞಾನ ಚಟುವಟಿಕೆಗಳು ಅಗತ್ಯ,” ಎಂದು ಅವರು ಹೇಳಿದರು.
ಕಾರ್ಯಕ್ರಮದ ಪ್ರಸ್ತಾವಿಕವಾಗಿ ಮಾತನಾಡಿದ ಬ್ರಹ್ಮಕುಮಾರಿ ಸಮಾಜದ ಬಿ.ಕೆ. ಸರಳಾ, “ಮಕ್ಕಳು ಉತ್ತಮ ನಡೆ-ನುಡಿಗಳನ್ನು ಅಳವಡಿಸಿಕೊಳ್ಳಲು ಶರಣರ ತತ್ವಗಳನ್ನು ಕಲಿಯಬೇಕು. ಶಿಬಿರದಲ್ಲಿ ಕ್ರಾಫ್ಟ್, ಚಿತ್ರಕಲೆ, ರಾಜಯೋಗ ಧ್ಯಾನ, ಪ್ರಾಣಾಯಾಮ, ಶ್ಲೋಕ ಪಠಣ, ಆರೋಗ್ಯ ಹಾಗೂ ಮೌಲ್ಯ ಶಿಕ್ಷಣ ನೀಡಲಾಗುತ್ತದೆ,” ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾತನಾಡಿ, “ಬಸವೇಶ್ವರ ಅವರು ಹನ್ನೆರಡನೇ ಶತಮಾನದಲ್ಲೇ ಸಮಾನತೆ, ಅಂತರ್ಜಾತಿ ವಿವಾಹ ಮತ್ತು ನ್ಯಾಯಸಮ್ಮತ ಸಮಾಜದ ಮಾದರಿಯನ್ನು ನೀಡಿದರು,” ಎಂದು ಹೇಳಿದರು.
ಹಾಸನ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಗಿರೀಜಾ ನಿರ್ವಾಣಿ ಮಾತನಾಡಿ, ದಾರ್ಶನಿಕರ ಜಯಂತಿಗಳು ಸ್ಪೂರ್ತಿದಾಯಕವಾಗಿದ್ದು, ಮಕ್ಕಳಿಗೆ ಸ್ಪರ್ಧೆಗಳ ಮೂಲಕ ಜ್ಞಾನಾರ್ಜನೆ ನೀಡುವುದು ಉತ್ತಮ ಪ್ರಯತ್ನ ಎಂದು ಹೇಳಿದರು. ಅವರು ಆದಿ ಶಂಕರಾಚಾರ್ಯರು ಹಾಗೂ ಬಸವಣ್ಣವರ ತತ್ವಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಸಮಾಜದ ಜಿಲ್ಲಾ ಮುಖ್ಯಸ್ಥೆ ರಾಜಯೋಗಿನಿ ಮೀನಕ್ಕ, ರಾಜಯೋಗಿನಿ ಶ್ವೇತಕ್ಕ, ರಾಧಾ ಶಶಿಯಕ್ಕ, ಹಾಸನಾಂಬ ಮಹಿಳಾ ವೇದಿಕೆಯ ಪದ್ಮಾವತಿ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
– ಶಿವಕುಮಾರ್ ಕಟ್ಟಾಯ
