ಶ್ಲೋಕ – 17
ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾತ್ ದೀಪ್ತನಲಾರ್ಕದ್ಯುತಿಮಪ್ರಮೇಯಮ್ ॥೧೭॥
ಕಿರೀಟಿನಮ್ ಗದಿನಮ್ ಚಕ್ರಿಣಮ್ ಚ ತೇಜೋರಾಶಿಮ್ ಸರ್ವತಃ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಮ್ ದುರ್ನಿರೀಕ್ಷ್ಯಮ್ ಸಮಂತಾತ್ ದೀಪ್ತ ಅನಳ ಅರ್ಕ ದ್ಯುತಿಮ್ ಅಪ್ರಮೇಯಮ್—ತಲೆಯಲ್ಲಿ ಮುಕುಟ. ಕೈಯಲ್ಲಿ ಗದೆ ಮತ್ತು ಚಕ್ರ. ಬೆಳಕಿನ ಮುದ್ದೆಯಾಗಿ ಎಲ್ಲೆಡೆಯು ಕೋರಯಿಸುವ ರೂಪ. ಸುಡುವ ಬೆಂಕಿಯಂತೆ, ಸೂರ್ಯನಂತೆ ಪ್ರಕಾಶವುಳ್ಳ , ಅಳೆಯಲಾಗದ ರೂಪ. ಕಣ್ಕುಕ್ಕುವ ನಿನ್ನ ಆ ರೂಪವನ್ನೇ ಸುತ್ತಲು ಕಾಣುತ್ತಿದ್ದೇನೆ.
ಸರ್ವಾಭರಣಭೂಶಿತನಾದ ಮನಮೋಹಕ ರೂಪ ಒಂದು ಕಡೆಯಾದರೆ, ಚಕ್ರ-ಗದೆಯನ್ನು ಹಿಡಿದ ಶತ್ರು ಭಯಂಕರ ರೂಪ ಇನ್ನೊಂದೆಡೆಗೆ. ಎಲ್ಲವೂ ಒಂದು ಬೆಳಕಿನ ಪುಂಜದಂತೆ ಕಾಣುತ್ತಿದೆ. ನೋಡಲಾಗದ್ದನ್ನು ಸ್ಪಷ್ಟವಾಗಿ ನೋಡುತ್ತಿರುವ ಅನುಭವ. ಅದು ಸುಡುವ ಬೆಂಕಿಯೋ ಅಥವಾ ಹೊಳೆವ ಸೂರ್ಯನೋ ತಿಳಿಯುತ್ತಿಲ್ಲ. ಅದೊಂದು ಅಳೆಯಲಾಗದ, ಅರಿಯಲಾಗದ ಅತ್ಯದ್ಭುತ ಅಪೂರ್ವ ರೂಪ.
