ಹಾಸನ: ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಕ್ರಿಯಾಶೀಲವಾಗಿರಬೇಕು ಎಂದು ಪತ್ರಕರ್ತ ರವಿ ನಾಕಲಗೊಡು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು–ಮೈಸೂರು–ಹಾಸನ ಹಾಗೂ ಶ್ರೀ ಶಾರದ ಕಲಾ ಸಂಘ, ವಿಜಯನಗರ ಬಡಾವಣೆ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ 2026–27ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಹಾಸನದ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಭಾನುವಾರ (ಏ. 19) ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಹಾಸನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ನಡೆಯಬೇಕಿದೆ. ಶ್ರೀ ಶಾರದ ಕಲಾ ಸಂಘವು ಹೆಚ್. ಜಿ. ಗಂಗಾಧರ್ ನೇತೃತ್ವದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ವಿವಿಧ ಕಲಾಪ್ರಕಾರಗಳಿಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ,” ಎಂದರು.
ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ತಮ್ಮ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳನ್ನು ಸ್ಮರಿಸಿದರು. ನಿವೃತ್ತ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, “ಮಕ್ಕಳಿಗೆ ಮನೆಮಟ್ಟದಲ್ಲೇ ಸಂಸ್ಕಾರ ಕಲಿಸುವುದು ಅವಶ್ಯಕ. ಮೊಬೈಲ್ ಯುಗದಲ್ಲಿ ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸುವುದು ದೊಡ್ಡ ಸವಾಲು,” ಎಂದು ಹೇಳಿದರು.

ಇನ್ನಿತರವಾಗಿ ಪುಟ್ಟರಾಜಪ್ಪ, ವಕೀಲ ಯೋಗೇಶ್, ಕಲಾವಿದ ರ್ಶನ್ ವೆಂಕಟೇಶ್, ಗೋವಿಂದೇಗೌಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶಿಕ್ಷಕ ಜವರಯ್ಯ ಉಪಸ್ಥಿತರಿದ್ದರು. ಲೇಖಕ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರಿಂದ ಲಲಿತ ಸಹಸ್ರನಾಮ ಪಠಣ, ಕಲಾವತಿ ಮಧುಸೂಧನ್ ಅವರಿಂದ ವೀಣಾವಾದನ, ಭಕ್ತಿಗೀತೆಗಳು, ಹೆಚ್. ಜಿ. ಗಂಗಾಧರ್ ಮತ್ತು ಜಿ.ಟಿ. ದೇವರಾಜು ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ನಡೆದವು. ಯಶೋಧ ತಂಡ ಸೋಬಾನೆ ಪದಗಳನ್ನು ಹಾಡಿತು. ‘ಗ್ಯಾರಂಟಿ ರಾಮಣ್ಣ’ ತಂಡದಿಂದ ‘ಸಂಕೋಲೆ’ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು.

ದುಡ್ಡ ಯೋಗೇಂದ್ರ ಮತ್ತು ದೊಡ್ಡಳ್ಳಿ ರಮೇಶ್ ತತ್ವಪದ ಹಾಗೂ ಜನಪದ ಗಾಯನ ನಡೆಸಿದರು. ಮೂಡಲಪಾಯ ಯಕ್ಷಗಾನ ‘ಭೀಮಾರ್ಜುನ ಕಾಳಗ’ (ರಚನೆ: ಚಂದ್ರು ಕಾಳೇನಹಳ್ಳಿ) ಅನ್ನು ಸಿ. ರಾಣಿ ಅವರ ಭಾವಗೀತೆಯೊಂದಿಗೆ ಕುದುರುಗುಂಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕು. ಎಂ.ಎನ್. ಗಂಗಶ್ರೀ ಮತ್ತು ಧೃತಿ ಶ್ರೀನಿಧಿ ಭರತನಾಟ್ಯ ಪ್ರದರ್ಶಿಸಿ ಗಮನಸೆಳೆದರು. ಅಂತಿಮವಾಗಿ ಎ.ಸಿ. ರಾಜು, ಹೆಚ್.ಜಿ. ಗಂಗಾಧರ್, ವೆಂಕಟೇಗೌಡ, ವಕೀಲ ಯೋಗೇಶ್, ದೇವರಾಜ್, ರಮೇಶ್, ವಿರೂಪಾಕ್ಷ, ತಿಮ್ಮೇಗೌಡ, ಕಬ್ಬತ್ತಿ ಸತೀಶ್, ತಬಲ ಕೃಷ್ಣಮೂರ್ತಿ, ಕೀಬೋರ್ಡ್ ಆಶ್ವಥ್, ಕಾರ್ಲೆ ಗೋವಿಂದೇಗೌಡ, ಪುಟ್ಟಸ್ವಾಮಿ ಮತ್ತು ರಂಗಸ್ವಾಮಿ ಅವರು ರಂಗಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ರಂಗೇರಿಸಿದರು.
