ತುಮಕೂರು: ತುಮಕೂರು ನಗರಪಾಲಿಕೆಯು 2026-27ನೇ ಸಾಲಿನ ಆಸ್ತಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕಾನೂನುಬಾಹಿರವಾಗಿ ದುಪ್ಪಟ್ಟು ಹೆಚ್ಚಳ ಮಾಡಿದೆ. ಹೆಚ್ಚಿಸಿರುವ ತೆರಿಗೆಯನ್ನು ರದ್ದು ಮಾಡಬೇಕು, ಇಲ್ಲವಾದಲ್ಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿಸಲ್ಲಿಸುವುದಾಗಿ ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕ್ರಯದ ಒಟ್ಟು ಮೊಬಲಗು ಮೊತ್ತದ ಶೇಕಡ 0.2ರಷ್ಟು ಪಾವತಿಸಿಕೊಳ್ಳುವುದು ಅಂತ ಪರಿಷ್ಕರಿಸಲಾಗಿದ್ದು. ಇದರಿಂದ ಸುಮಾರು ಶೇಕಡ 50ರಷ್ಟು ತೆರಿಗೆ ಹೊರೆ ಜನರ ಮೇಲೆ ಬೀಳಲಿದೆ. ಈ ಮೂಲಕ ನಗರಪಾಲಿಗೆ ಹಗಲು ದರೋಡೆಗಿಳಿದಿದೆ ಎಂದು ಟೀಕಿಸಿದರು.
ಸದರಿ ಪರಿಷ್ಕರಣೆ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ಹಾಗೂ ಕರ್ನಾಟಕ ಸ್ಟಾಂಪ್ಗಳ ಅಧಿನಿಯಮ 1957 ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಸದರಿ ತೆರಿಗೆ ಪರಿಷ್ಕರಣೆಯು ಕಾನೂನುಬಾಹಿರ ಕೃತ್ಯವಾಗಿರುತ್ತದೆ. ಈ ರೀತಿ ಪರಿಷ್ಕರಣೆಗೆ ಆದೇಶವಿಲ್ಲದಿದ್ದಲ್ಲಿ ಸದರಿ ಪರಿಷ್ಕರಣೆಯನ್ನು ಕೂಡಲೇ ತಡೆಹಿಡಿಯಬೇಕೆಂದು ಜಿ.ಎಸ್.ಬಸವರಾಜು ಒತ್ತಾಯಿಸಿದರು.
2025-26ನೇ ಸಾಲಿನ ನೀರಿನ ತೆರಿಗೆ ರೂ. 2400 ಇದ್ದು, 2026-27ನೇ ಸಾಲಿಗೆ ರೂ. 3600 ಎಂದು ಪರಿಷ್ಕರಣೆ ಆಗಿರುತ್ತದೆ. ಅಂದರೆ ಕಳೆದ ವರ್ಷಕ್ಕಿಂತ ಶೇ 50ರಷ್ಟು ಜಾಸ್ತಿಯಾಗಿರುತ್ತದೆ. ಸದರಿ ತೆರಿಗೆ ಕಳೆದ ವರ್ಷಕ್ಕಿಂತ ಶೇ 200ರಷ್ಟು ಹೆಚ್ಚಳವಾಗಿದ್ದು, ಈ ರೀತಿ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಿಸಲು ಸರ್ಕಾರದ ಆದೇಶ ಅಥವಾ ನಿರ್ದೇಶನ ಇಲ್ಲದಿದ್ದಲ್ಲಿ ಈ ಕೂಡಲೇ ತೆರಿಗೆ ಪರಿಷ್ಕರಣೆಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಹಿಂಪಡೆಯಬೇಕು ಎಂದರು.
ಜನ ಸಂಪರ್ಕ ಸದರಿ ಪರಿಷ್ಕರಣೆಗೆ ಸಂಬಂಧಿಸಿದಂತೆ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ದೂರು ನೀಡಿದಾಗ, ಆಯುಕ್ತರ ಸಮಕ್ಷಮದಲ್ಲೇ ಸಚಿವರು ತೆರಿಗೆ ಪರಿಷ್ಕರಣೆಗೆ ಅಸಮಾಧಾನ ವ್ಯಕ್ತಪಡಿಸಿ, ತೆರಿಗೆ ಪರಿಷ್ಕರಣೆ ಹಿಂಪಡೆಯುವಂತೆ ಆಯುಕ್ತರಿಗೆ ಮೌಖಿಕ ಆದೇಶ ನೀಡಿದರು. ತೆರಿಗೆ ಹೆಚ್ಚಳ ರದ್ದುಪಡಿಸದಿದ್ದರೆ ಸಂಬಂಧಿಸಿದವರ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಜಿ.ಎಸ್. ಬಸವರಾಜು ಎಚ್ಚರಿಕೆ ನೀಡಿದರು.ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ಉಪಾಧ್ಯಕ್ಷ ಜಿ.ಕೆ.ಶ್ರೀನಿವಾಸ್,ವಿಜಯಕುಮಾರ್ ಹಾಜರಿದ್ದರು.
