ಕೆ ಆರ್ ಪೇಟೆ ಹೊರ ವಲಯದ ತೇಗನಹಳ್ಳಿ ಗೇಟ್ ಬಳಿ ಇರುವ ಆಶೀರ್ವದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಶಾಲೆಯ ಧನ್ಯತಾ.ಹೆಚ್ ಹಾಗೂ ಚರಣ್ಯ.ಕೆ.ಎಂ. ವಿದ್ಯಾರ್ಥಿನಿಯರು ತಲಾ 620ಅಂಕಗಳನ್ನು ಪಡೆದುಕೊಳ್ಳುವ ಮೂಲಕ ತಾಲ್ಲೂಕು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಶಾಲೆಯಲ್ಲಿ ಒಟ್ಟು 119ವಿದ್ಯಾರ್ಥಿಗಳು ಪರೀಕ್ಷೇ ಬರೆದಿದ್ದರು. ಈ ಪೈಕಿ 69ಮಂದಿ ಡಿಸ್ಟಿಂಕ್ಷನ್ ನಲ್ಲಿ, ಉಳಿದ 50ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಹೊಂದುವ ಮೂಲಕ ಉತ್ತಮ ಸಾಧನೆ ಮಾಡಿರುತ್ತಾರೆ.
ಅತಿ ಹೆಚ್ಚು ಅಂಕಗಳನ್ನು ಪಡೆದು ತಾಲ್ಲೂಕು ಟಾಪರ್ ಆಗಿರುವ ಹೆಚ್.ಧನ್ಯತಾ ಹಾಗೂ ಕೆ.ಎಂ.ಚರಣ್ಯ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೈ.ಕೆ.ತಿಮ್ಮೇಗೌಡ ಅವರು ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ.
ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೈ.ಕೆ.ತಿಮ್ಮೇಗೌಡ ಅವರು ತಾಲ್ಲೂಕಿನ ಗ್ರಾಮೀಣ ಪ್ರದೇಶವಾದ ತೇಗನಹಳ್ಳಿ ಗ್ರಾಮದಲ್ಲಿರುವ ಆಶೀರ್ವಾದ ಆಂಗ್ಲಮಾಧ್ಯಮ ಪ್ರೌಢಶಾಲೆಯು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಮಕ್ಜಳು ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡುವ ಅವಕಾಶವನ್ನು ಕಲ್ಪಿಸುತ್ತಿದೆ.
ಕಳೆದ ಎರಡು ವರ್ಷಗಳ ಹಿಂದೆ ಇದೇ ಶಾಲೆಯ ವಿದ್ಯಾರ್ಥಿನಿ ಬಿ.ಎಸ್.ಮೊನಾಲಿಸಾ ಹಾಗೂ ಸಹನಾ ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 624ಅಂಕಗಳನ್ನು ಪ್ರಪ್ರಥಮ ಭಾರಿಗೆ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿರುವುದು ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಸೂಚಿಸುತ್ತದೆ. ಅದೇ ರೀತಿ 2023ನೇ ಸಾಲಿನಲ್ಲಿ ಮೋಕ್ಷಲಕ್ಷ್ಮೀ ಎಂಬಾಕೆ 624ಅಂಕಗಳನ್ನು ಪಡೆದು ಎರಡನೇ ಭಾರಿಗೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿರುವುದು ಶಾಲೆಯ ಶೈಕ್ಷಣಿಕ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಇದೇ ನಾಗಾಲೋಟವನ್ನು ಮುಂದುವರೆಸಿರುವ ಆಶೀರ್ವಾದ್ ಶಾಲೆಯು ಈ ಭಾರಿಯೂ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ 2ನೇ ಸ್ಥಾನವನ್ನು ಶಾಲೆಯ ಧನ್ಯತಾ ಮತ್ತು ಚರಣ್ಯ ಅವರು ಪಡೆದುಕೊಂಡಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಜೋಸ್ಲಿನ್ ಕ್ರಾಸ್ತಾ, ಶಿಕ್ಷಣ ಸಂಯೋಜಕ ಹರೀಶ್ ಹಾಗೂ ಧನ್ಯತಾ ಹಾಗೂ ಚರಣ್ಯ ಪೋಷಕರು, ಶಾಲಾ ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
