ಹಾಸನ, ಆ.7: ನಾಟಕವು ಒಂದು ಜೀವಂತ ಕಲೆಯಾಗಿದ್ದು, ಟಿವಿ ಹಾಗೂ ಆಧುನಿಕ ಮನರಂಜನಾ ಮಾಧ್ಯಮಗಳ ಪ್ರಭಾವದ ನಡುವೆಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಶಕ್ತಿ ರಂಗಭೂಮಿಗಿದೆ ಎಂದು ಸಾಹಿತಿ ಹಾಗೂ ನಾಟಕಕಾರ ಗೊರೂರು ಅನಂತರಾಜು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಸನದ ಅನುದಾನದಡಿ, ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಂಗಗೀತೆ, ಭರತನಾಟ್ಯ, ಜಾನಪದ ಗೀತೆ ಹಾಗೂ ಶೋಭಾನೆ ಪದಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಾಸನದಲ್ಲಿ ಪೌರಾಣಿಕ ರಂಗಭೂಮಿ ಇಂದಿಗೂ ಹಿರಿಯ ನಾಗರಿಕರು ಹಾಗೂ ಕಲಾಪ್ರೇಮಿಗಳಿಗೆ ಮನರಂಜನೆ ನೀಡುತ್ತಿದ್ದು, ಸ್ಥಳೀಯ ನಾಟಕ ತಂಡಗಳು ಕಾಲಕಾಲಕ್ಕೆ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಕಲೆಯ ಪರಂಪರೆಯನ್ನು ಜೀವಂತವಾಗಿರಿಸಿವೆ ಎಂದು ಹೇಳಿದರು.
ಕೆಲವು ವರ್ಷಗಳ ಹಿಂದೆ ಹಾಸನದಲ್ಲಿ ರಂಗಸಂಗೀತ ಪರಿಷತ್ ವತಿಯಿಂದ ಯಶಸ್ವಿಯಾಗಿ ರಂಗಸಂಗೀತ ಸಮ್ಮೇಳನ ನಡೆದಿತ್ತು. ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿಯಲ್ಲಿ 300ಕ್ಕೂ ಹೆಚ್ಚು ಕಲಾವಿದ ಸದಸ್ಯರಿದ್ದು, ಇದೇ ಮಾದರಿಯಲ್ಲಿ ಈಗಿನ ಸಮಿತಿಯ ಅವಧಿಯಲ್ಲಿ ಮತ್ತೊಮ್ಮೆ ರಂಗಸಂಗೀತ ಸಮ್ಮೇಳನ ಆಯೋಜಿಸಬೇಕು ಎಂದು ಆಶಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕವಿ ಎನ್.ಎಲ್. ಚನ್ನೇಗೌಡ, ಸಂಘಟನೆಯನ್ನು ಕಟ್ಟುವುದು ಹಾಗೂ ಉಳಿಸಿಕೊಂಡು ಹೋಗುವುದು ಸವಾಲಿನ ಕೆಲಸ. ಪ್ರಾಮಾಣಿಕತೆ ಇದ್ದಲ್ಲಿ ಮಾತ್ರ ಸಂಘಟನೆ ಸದೃಢವಾಗಿ ಉಳಿಯುತ್ತದೆ. ಕಲೆ ಎಲ್ಲರನ್ನೂ ಆಕರ್ಷಿಸುತ್ತದೆ, ಆದರೆ ಕೆಲವರನ್ನಷ್ಟೇ ಅಪ್ಪಿಕೊಳ್ಳುತ್ತದೆ ಎಂದು ಹೇಳಿದರು.
ಕಲಾವಿದ ದರ್ಶನ್ ವೆಂಕಟೇಶ್ ಮಾತನಾಡಿ, ಸಾಹಿತ್ಯದ ಮೊದಲ ಮೆಟ್ಟಿಲು ನಾಟಕವಾಗಿದ್ದು, ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿ ಬಿದರೆ, ತಮ್ಮ ಅವಧಿಯಲ್ಲಿ ಸರ್ಕಾರದ ಆರ್ಥಿಕ ನೆರವಿನೊಂದಿಗೆ ರಂಗಸಂಗೀತ ಸಮ್ಮೇಳನ ಆಯೋಜಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪೌರಾಣಿಕ ನಾಟಕ ನಿರ್ದೇಶಕರಾದ ಎ.ಸಿ. ರಾಜು, ಎಂ. ಮಹದೇವ್, ಪಾಲಾಕ್ಷಾಚಾರ್, ವೀರಭದ್ರಾಚಾರ್, ಹಿರಿಯ ನಟರಾದ ಪೊಲೀಸ್ ನಂಜಪ್ಪ, ತಬಲ ಕೃಷ್ಣಪ್ಪ, ಸೀನ್ಸ್ ಲಕ್ಷ್ಮಣ್ ಹಾಗೂ ಕಲಾವಿದೆ ಲಕ್ಷ್ಮಮ್ಮ ಮೆಳಗೋಡು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ರಾಮಣ್ಣ, ತೇಜೂರು ಸೋಮಣ್ಣ, ಎಚ್.ಎಲ್. ಶಶಿಕಾಂತ್, ಪ್ರಕಾಶ್ ತಟ್ಟೇಕೆರೆ, ನಾಗರಾಜ್, ಸಿ.ಜಿ. ಪ್ರಭಾಕರ್, ರಮೇಶ್ ಗೌಡಪ್ಪ, ಪೊಲೀಸ್ ರಂಗಸ್ವಾಮಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ನಿರ್ದೇಶಕರು ಮತ್ತು ಕಲಾವಿದರು ಭಾಗವಹಿಸಿದ್ದರು. ಸಾವಿತ್ರಿ ಗಂಗಾಧರ್ ಪ್ರಾರ್ಥನೆ ನೆರವೇರಿಸಿದರು. ನಟ ಪ್ರದೀಪ್ ಗವೇನಹಳ್ಳಿ ಕಾರ್ಯಕ್ರಮ ನಿರೂಪಿಸಿ, ನಟ ನಾಗಮೋಹನ್ ವಂದಿಸಿದರು.
