ಶ್ಲೋಕ – 28
ಯಥಾ ನದೀನಾಂ ಬಹವೋSಮ್ಬುವೇಗಾಃ ಸಮುದ್ರಮೇವಾಭಿಮುಖಾ ದ್ರವಂತಿ ।
ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ ॥೨೮॥
ಯಥಾ ನದೀನಾಮ್ ಬಹವಃ ಅಂಬುವೇಗಾಃ ಸಮುದ್ರಮ್ ಏವ ಅಭಿಮುಖಾ ದ್ರವಂತಿ ।
ತಥಾ ತವಾಮೀ ನರಲೋಕವೀರಾಃ ವಿಶಂತಿ ವಕ್ತ್ರಾಣಿ ಅಭಿವಿಜ್ವಲಂತಿ –-ನರಲೋಕದ ಈ ವೀರರೆಲ್ಲ ಕೋರೈಸುವ ನಿನ್ನ ಮೋರೆಗಳೊಳಗೆ ಸೇರುತ್ತಿದ್ದಾರೆ. ನದಿಗಳ ಹತ್ತು ಹಲವು ನೀರ ಸೆಲೆಗಳು ಕಡಲ ಕಡೆಗೆ ಹರಿಯುವಂತೆ.
ಪುಣ್ಯ ಜೀವಿಗಳು ಭಗವಂತನ ಬಾಯಿಯನ್ನು ಹೇಗೆ ಪ್ರವೇಶಿಸುತ್ತಿದ್ದಾರೆ ಎನ್ನುವುದನ್ನು ಅರ್ಜುನ ವರ್ಣಿಸುತ್ತಿದ್ದಾನೆ. ಹೇಗೆ ಎಲ್ಲ ನದಿ ನೀರು ಸಮುದ್ರವನ್ನು ಸೇರುತ್ತದೋ ಹಾಗೆ ಈ ನರಲೋಕದ ವೀರರು ನಿನ್ನನ್ನು ಸೇರುತ್ತಿದ್ದಾರೆ ಎನ್ನುತ್ತಾನೆ ಅರ್ಜುನ. ಇದೊಂದು ಮಾಂಗಲಿಕ ದೃಷ್ಟಾಂತ. ಇಲ್ಲಿ ಭಯಾನಕ ನೋಟವಿಲ್ಲ.
