ಶ್ಲೋಕ – 23
ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ ।
ಗುಣಾ ವರ್ತಂತ ಇತ್ಯೇವ ಯೋSವತಿಷ್ಠತಿ ನೇಂಗತೇ ॥೨೩॥
ಉದಾಸೀನವತ್ ಆಸೀನಃ ಗುಣೈಃ ಯಃ ನ ವಿಚಾಲ್ಯತೇ ।
ಗುಣಾಃ ವರ್ತಂತ ಇತಿ ಏವ ಯಃ ಅವತಿಷ್ಠತಿ ನ ಇಂಗತೇ –ಉದಾಸೀನನಂತೆ ಇದ್ದುಬಿಡುತ್ತಾನೆ. ಗುಣಗಳ ಸೆಳೆತಕ್ಕೆ ಕದಲುವುದಿಲ್ಲ. ಗುಣಗಳು ಇರುವಂಥವೆ ಎಂದು ತೆಪ್ಪಗೆ ಇದ್ದು ಬಿಡುತ್ತಾನೆ. ಅವುಗಳ ತಾಳಕ್ಕೆ ತಾನು ಕುಣಿಯುವುದಿಲ್ಲ.
ಪ್ರಾಪಂಚಿಕ ವ್ಯವಹಾರದಲ್ಲಿ ಈತ ಉದಾಸೀನನಂತೆ ಇದ್ದುಬಿಡುತ್ತಾನೆ. ನಮಗೆ ಬೇಕು ಬೇಡಗಳು ಬರುವುದು ತ್ರಿಗುಣಗಳಿಂದ. ತ್ರಿಗುಣಾತೀತ- “ಹಾಗಾಗಬೇಕು-ಹೀಗೇ ಆಗಬೇಕು” ಎಂದು ಬಯಸುವುದಿಲ್ಲ. “ಹೇಗಾಗಬೇಕೋ ಹಾಗೆ ಭಗವಂತ ಮಾಡುತ್ತಾನೆ” ಎನ್ನುವ ನಂಬಿಕೆ ಅವನಲ್ಲಿರುತ್ತದೆ.[ಇಲ್ಲಿ ಒಂದು ವಿಷಯವನ್ನು ನಾವು ತಿಳಿದುಕೊಳ್ಳಬೇಕು. ಪ್ರಪಂಚದಲ್ಲಿ ನಡೆಯುವ ಘಟನೆಗಳು ನಮ್ಮ ಅಧೀನವಲ್ಲ. ನಾವು ಆಗಬಾರದು ಅಂದುಕೊಳ್ಳುವುದು ಆಗಬಹುದು, ಆಗಬೇಕು ಅಂದುಕೊಳ್ಳುವುದು ಆಗದೇ ಇರಬಹುದು. ಹೀಗಿರುವಾಗ ‘ಹೀಗೇ ಆಗಬೇಕು’ ಎಂದು ವ್ಯರ್ಥವಾಗಿ ಮನಸ್ಸನ್ನು ಉದ್ವೇಗಕ್ಕೊಳಪಡಿಸುವುದರಲ್ಲಿ ಅರ್ಥವಿಲ್ಲ]. ಹೀಗೆ ಬದುಕಿದಾಗ-ಬಯಸಿದ್ದು ಆಗದಿದ್ದಾಗ ಕೋಪವಿಲ್ಲ, ಆದಾಗ ಹಾರಾಟವಿಲ್ಲ. ಮನಸ್ಸು ಪ್ರಸನ್ನವಾಗಿರುತ್ತದೆ.
ಇಂದ್ರಿಯಗಳು ಗುಣಗಳಲ್ಲಿ ಇರುತ್ತವೆ, ಇಂದ್ರಿಯಗಳ ಹಿಂದೆ ಗುಣಗಳಿರುತ್ತವೆ. ಆದರೆ ತ್ರಿಗುಣಾತೀತ ಇವೆಲ್ಲವನ್ನೂ ತಿಳಿದು, ತಲೆಕೆಡಿಸಿಕೊಳ್ಳದೆ, ಯಾವುದೇ ಕ್ರಿಯೆಯಲ್ಲಿ ಕೂಡ[ತಾತ್ಕಾಲಿಕ ಕ್ರಿಯೆಯಲ್ಲಿ ಕೂಡ] ಚಪಲವಿಲ್ಲದೆ ಬದುಕುತ್ತಾನೆ.
