ತುಮಕೂರು:ಐದು ರಾಜ್ಯಗಳ ಚುನಾವಣೆ ಇರುವ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಒಕ್ಕೂಟ ಲೋಕಸಭಾ ವಿಶೇಷ ಅಧಿವೇಶದಲ್ಲಿ ಮಂಡಿಸಿದ ಮಹಿಳಾ ಮೀಸಲು ಮಸೂದೆ, ತೆರೆ ಮರೆಯಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆಗೆ ಹೂಡಿದ ತಂತ್ರವಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ಕುಸುಮ.ಹೆಚ್. ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2023ರ ಸೆಪ್ಟಂಬರ್ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡನೆಯಾಗಿ,ಒಮ್ಮತದಿ೦ದ ಅಂಗೀಕಾರವಾದ ಮಸೂದೆಯನ್ನು ಜಾರಿಗೆ ತರದೆ, ಐದು ರಾಜ್ಯಗಳ ಚುನಾವಣೆಯಲ್ಲಿ ಮತದಾರರ ಮುಂದೆ ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಎಂದು ಬಿಂಬಿಸುವ ಸಲುವಾಗಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಮಾಡಿದ ಕುತಂತ್ರವಾಗಿದೆ.ಈ ಸತ್ಯವನ್ನು ಜನರ ಮುಂದಿಡುವ ಸಲುವಾಗಿ ಕೆಪಿಸಿಸಿ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಮಾಧ್ಯಮಗಳು ಮತ್ತು ಜನರ ಮುಂದೆ ಇಂತಹ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಯುಪಿಎ ಸರಕಾರ ಸಿದ್ದಪಡಿಸಿದ ಮಹಿಳಾ ಬಿಲ್ನ್ನು ಅದೇ ಹೆಸರಿನಲ್ಲಿ 2023ರಲ್ಲಿ ಮಂಡಿಸಿ, ಒಪ್ಪಿಗೆ ಪಡೆದು, 2026ರ ಜನಗಣತಿ ನಂತರ ಕ್ಷೇತ್ರಗಳ ಪುನರ್ ವಿಂಗಡನೆ ಮಾಡಿ,ನಂತರ ಜಾರಿಗೆ ತರುವ ಮಾತುಗಳನ್ನಾಡಿದ್ದ ಕೇಂದ್ರ ಸರಕಾರ,ಐದು ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಜನರ ಬಳಿ ಹೋಗಲು ಮುಖವಿಲ್ಲದೆ, ಮತ್ತೊಮ್ಮೆ ನಾರಿ ಶಕ್ತಿ ವಂದನ್ ಹೆಸರಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವ ನಾಟಕವಾಡಿ,ಮತದಾರರನ್ನು ಮರಳು ಮಾಡಲು ಬಳಸಿಕೊಂಡಿದೆ.ನಿಜವಾದ ಮಹಿಳಾ ವಿರೋಧಿಗಳೆಂದರೆ ಅದು ಬಿಜೆಪಿ ಪಕ್ಷ, ಮಹಿಳೆಯರ ಬಗ್ಗೆ ಅಷ್ಟು ಕಾಳಜಿ ಇದ್ದರೆ ಈಗಾಗಲೇ ಅನುಮೋಧನೆ ಯಾಗಿರುವ ಬಿಲ್ನ ಪ್ರಕಾರ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ33ರಷ್ಟು ಮಹಿಳಾ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಲಿ ಎಂದು ಕುಸುಮ ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅನಿಬೇಸೆಂಟ್, ಪ್ರಧಾನಿಯಾಗಿ ಇಂದಿರಾಗಾಂಧಿ,ಸ್ಪೀಕರ್ ಆಗಿ ಮೀರಾಕುಮಾರ್, ರಾಷ್ಟ್ರಪತಿಯಾಗಿ ಪ್ರತಿಭಾಪಾಟೀಲ್,ರಾಜ್ಯಪಾಲರಾಗಿ ಸರೋಜಿನಿನಾಯ್ಡು ಹೀಗೆ ಕಾಂಗ್ರೆಸ್ನಿ೦ದ ಅಧಿಕಾರ ಪಡೆದ ಮಹಿಳೆಯರ ದೊಡ್ಡ ದಂಡೇ ಇದೆ.ಆದರೆ ಬಿಜೆಪಿಯನ್ನು ಮುನ್ನೆಡೆಸುತ್ತಿರುವ ಆರ್.ಎಸ್.ಎಸ್.ನಲ್ಲಿ ಇದುವರೆಗೂ ಮಹಿಳೆಯರಿಗೆ ಅವಕಾಶವಿಲ್ಲ ಏಕೆ?,ಮೋದಿ ಅವರಿಗೆ ನಿಜಕ್ಕೂ ಮಹಿಳೆಯರಿಗೆ ಅಧಿಕಾರ ನೀಡಬೇಕೆಂದಿದ್ದರೆ, ಪ್ರಧಾನಿ ಸ್ಥಾನಕ್ಕೆ ಮಹಿಳೆಯರೊಬ್ಬರನ್ನು ಆಯ್ಕೆ ಮಾಡಿ, ನಂತರ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲಿ.ಹೀಗಿರುವ 543 ಕ್ಷೇತ್ರಗಳಲ್ಲಿಯೇ ಶೇ33ರಷ್ಟು ಸಂಸದರ ಸ್ಥಾನವನ್ನು ಮಹಿಳೆಯರಿಗೆ ಬಿಟ್ಟುಕೊಡಲಿ.ಮತ ರಾಜಕಾರಣ ಕೋಸ್ಕರ ಮಹಿಳಾ ಮೀಸಲಿನಂತಹ ಮಹತ್ವದ ಮಸೂದೆಯನ್ನು ಅಪಮಾನಿಸಬಾರದು ಎಂದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ,ಕೇವಲ ಐದು ರಾಜ್ಯಗಳ ಚುನಾವಣೆಯಲ್ಲಿ ಮತಗಳಿಸುವ ಉದ್ದೇಶದಿಂದ ಈಗಾಗಲೇ ಎರಡು ಸದನಗಳಲ್ಲಿ ಅನುಮೋದನೆಗೊಂಡಿರುವ ಮಹಿಳಾ ಮೀಸಲು ಮಸೂದೆ ಪುನಃ ಮಂಡಿಸಿ, ಕಾಂಗ್ರೆಸ್ ಪಕ್ಷವನ್ನು ಮಹಿಳಾ ವಿರೋಧಿ ಎಂದು ಬಿಂಬಿಸಲು ಹೊರಟಿರುವ ಬಿಜೆಪಿ ಪಕ್ಷ ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಕೊಡುಗೆ ಏನು ? ಎಂದು ಪ್ರಶ್ನಿಸಿದ ಅವರು,ಇದುವರೆಗೂ ಮಹಿಳೆಯರ ಪರವಾಗಿ ಇರುವ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ,, ನೆಹರು ಕಾಲದಿಂದ ಇಲ್ಲಿಯವರೆಗೂ ಪಕ್ಷದಲ್ಲಾಗಲಿ, ಸರಕಾರಗಳ ಆಡಳಿತದಲ್ಲಾಗಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶವನ್ನು ಕಾಂಗ್ರೆಸ್ ನೀಡಿದೆ.ಬಿಜೆಪಿಯ ಅಪಪ್ರಚಾರದ ವಿರುದ್ದ ಮಹಿಳಾ ಕಾಂಗ್ರೆಸ್ ಮತ್ತಷ್ಟು ಸತ್ಯವನ್ನು ಜನರ ಮುಂದಿಡುವ ಕೆಲಸವನ್ನು ಮಾಡಲಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಬಿಜೆಪಿ ಪಕ್ಷ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನಾಗಿಸಲು ಹೊರಟಿದೆ.ಇದನ್ನು ತಡೆಯುವ ನಿಟ್ಟಿನಲ್ಲಿ ಇಂದು ಕೆಪಿಸಿಸಿ ವತಿಯಿಂದ ಪ್ರತಿ ಜಿಲ್ಲೆಯಲ್ಲಿಯೂ ಅಭಿಯಾನ ನಡೆಸಿ, ಜನರಿಗೆ ಸತ್ಯ ತಿಳಿಸುವ ಪ್ರಯತ್ನ ಮೊದಲ ಹಂತದಲ್ಲಿ ನಡೆಸಿದ್ದೇವೆ.ಎರಡನೇ ಹಂತದಲ್ಲಿ ಶಾಲಾ, ಕಾಲೇಜುಗಳಲ್ಲಿ ಯುವಜನರಿಗೆ ಮಹಿಳಾ ಮಸೂದೆಯ ಹಿಂದಿನ ಕಹಿ ಸತ್ಯಗಳನ್ನು ಸಂವಾದ, ವಿಚಾರ ಸಂಕಿರಣದ ಮೂಲಕ ಮನವರಿಕೆ ಮಾಡಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ||ವನಿತಾ,ಶುಭ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ, ವಿಜಯಲಕ್ಷ್ಮಿ , ನಿಂಗರಾಜು, ಇರ್ಫಾನ್ ಅಹಮದ್, ಮಂಜುನಾಥ್, ಶಿವಾಜಿ, ಭೈಲಪ್ಪ, ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
