ಕೊರಟಗೆರೆ :- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ “ಜಲಜೀವನ್ ಮಿಷನ್” ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದ್ದರೂ, ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಶಕುನಿ ತಿಮ್ಮನಹಳ್ಳಿ ಗ್ರಾಮದಲ್ಲಿ ಈ ಯೋಜನೆ ಕಳಪೆ ಕಾಮಗಾರಿಯಿಂದ ಜನರ ಆಕ್ರೋಶಕ್ಕೆ ಗುರಿಯಾಗಿದೆ.
ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಓವರ್ ಹೆಡ್ ಟ್ಯಾಂಕ್ ಸುತ್ತಲೂ ಹಾಕಲಾಗುತ್ತಿರುವ ತಂತಿ ಬೇಲಿ ಪೆನ್ಸಿಂಗ್ ಕಾಮಗಾರಿ ಸಂಪೂರ್ಣವಾಗಿ ಮಾನದಂಡಗಳಿಗೆ ವಿರುದ್ಧವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ತಂತಿ ಬೇಲಿ ಕಂಬಗಳನ್ನು ನೆಲಕ್ಕೆ ಅಡಿಸುವಾಗ ಅಗತ್ಯವಾದ ಕಾಂಕ್ರೀಟ್ ಬೆಡ್ಡಿಂಗ್ ಮಾಡದೇ, ತಾತ್ಕಾಲಿಕವಾಗಿ ನೆಲಕ್ಕೆ ಗೂಡು ಹಾಕಿದಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾಮಗಾರಿಯಲ್ಲಿ ಕಾಂಕ್ರೀಟ್ ಹಾಕದೆ ತರಾತುರಿಯಲ್ಲಿ ಪೆನ್ಸಿಂಗ್ ಕಾಮಗಾರಿ ನಡೆಸುತ್ತಿರುವುದು ನಾಳೆಯ ದಿನಗಳಲ್ಲಿ ಭದ್ರತೆಗೆ ಧಕ್ಕೆ ತರಲಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯೋಜನೆಗೆ ಮೀಸಲಾದ ಸಾರ್ವಜನಿಕ ಹಣವನ್ನು ಸರಿಯಾಗಿ ಬಳಸದೇ, ಕೇವಲ ಕೆಲಸ ಮುಗಿದಂತೆ ತೋರಿಸಲು ಗುತ್ತಿಗೆದಾರರು ಇಂತಹ ಕಳಪೆ ಕೆಲಸಕ್ಕೆ ಕೈ ಹಾಕಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಇದಲ್ಲದೆ, ಈ ಕಾಮಗಾರಿಗೆ ಸಂಬಂಧಿಸಿದಂತೆ ಒಂದೇ ಯೋಜನೆಗೆ ಎರಡೆರಡು ಬಾರಿ ಟೆಂಡರ್ ನೀಡಿರುವ ವಿಚಾರವೂ ಸಂಶಯಕ್ಕೆ ಕಾರಣವಾಗಿದೆ. ಮೊದಲನೇ ಗುತ್ತಿಗೆದಾರರಾದ ಪುರುಷೋತ್ತಮ್ ಅವರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ, ಸುಮಾರು 65% ಹಣ ಪಡೆದು ಪರಾರಿಯಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ. ನಂತರ ಎರಡನೇ ಹಂತದಲ್ಲಿ ಗುತ್ತಿಗೆ ಪಡೆದ ಗುಬ್ಬಿಯ ಭರತ್ ಅವರು ಕೂಡ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ್ದು, ಹಲವಾರು ಲೋಪಗಳು ಗೋಚರಿಸುತ್ತಿವೆ.
ಗ್ರಾಮದ ಹತ್ತಾರು ವರ್ಷಗಳ ಹಿಂದೆ ಬಹಳ ಗಟ್ಟು ಮುಟ್ಟಾಗಿ ನಿರ್ಮಿಸಿದಂತ ಸಿಸಿ ರಸ್ತೆಯನ್ನ ಇತ್ತೀಚಿಗೆ ಕಾಮಗಾರಿಯ ಉದ್ದೇಶಕ್ಕಾಗಿ ಸಿಸಿ ರಸ್ತೆ ಕೊರಿಯಲಾಗಿದ್ದು ಕಾಂಕ್ರೀಟ್ ರಸ್ತೆ ತಿಂಗಳು ಕಳೆದರೂ ಫಿಲ್ಲಿಂಗ್ ಮಾಡದೇ ಬಿಟ್ಟಿರುವುದರಿಂದ ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು , ಕೆಲವು ಮನೆಗಳ ಮುಂದೆ ರಸ್ತೆ ಅಗೆದು ತಿಂಗಳಾದರೂ ಗುಂಡಿಗಳನ್ನು ಮುಚ್ಚದೇ ಬಿಟ್ಟಿರುವುದರಿಂದ ಸ್ಥಳೀಯರು ದಿನನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ. ಮಕ್ಕಳು, ವೃದ್ಧರು ಸಂಚಾರ ಮಾಡುವಾಗ ಅಪಾಯದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಆರೋಪ ಪ್ರಕಾರ, ಗುತ್ತಿಗೆದಾರರು ತಮ್ಮ ಹಣದ ಲಾಭಕ್ಕಾಗಿ ಮಾತ್ರ ಗಮನಹರಿಸಿ, ಕಾಮಗಾರಿಯ ಗುಣಮಟ್ಟವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡದೇ, ಗುತ್ತಿಗೆದಾರರು ತಮ್ಮದೇ ಆದ ನಿರ್ಲಕ್ಷ್ಯ ಧೋರಣೆ ಮುಂದುವರಿಸುತ್ತಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮೀರಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಈ ಎಲ್ಲಾ ಅವ್ಯವಸ್ಥೆಗಳ ನಡುವೆಯೂ ಕಣ್ಮುಚ್ಚಿ ಕುಳಿತಿರುವುದು ಮತ್ತಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂತಹ ಕಳಪೆ ಕಾಮಗಾರಿಗಳು ನಡೆಯುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ತಾಲೂಕಿನಾದ್ಯಂತ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳು ಸಮಸ್ಯೆಗಳಲ್ಲೇ ಮುಳುಗಿರುವುದು ಸಾಮಾನ್ಯವಾಗಿದ್ದು, ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಈ ಕಾಮಗಾರಿಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳೇ ಜನರಿಗೆ ತೊಂದರೆ ಉಂಟುಮಾಡುವ ಮಟ್ಟಕ್ಕೆ ಇಳಿದಿರುವುದು ವಿಷಾದನೀಯ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ, ಸರಿಪಡಿಸುವ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
– ಶ್ರೀನಿವಾಸ್ ಕೊರಟಗೆರೆ.
