ತುಮಕೂರು : ಬಡತನ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಸದುದ್ದೇಶದಿಂದ ಸಾಮಾಜಿಕ ಕಳಕಳಿಯಿಂದ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆ ಸ್ಕಾಲರ್ಶಿಪ್ ಯೋಜನೆಯನ್ನು ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಕಳೆದ ಹತ್ತು ವರ್ಷಗಳಿಂದ ಜಾರಿಗೊಳಿಸುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಸ್ಥೆ ವಾರ್ಷಿಕ 2 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದೆ. ಇದೇ 10ರಂದು ಕಾಲೇಜಿನ ಆವರಣದಲ್ಲಿ ಸ್ಕಾಲರ್ಶಿಪ್ ಟೆಸ್ಟ್ ನಡೆಯಲಿದ್ದು ಇದರಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮೊದಲ 11 ವಿದ್ಯಾರ್ಥಿಗಳಿಗೆ ನಾಲ್ಕು ವರ್ಷ ಉಚಿತ ಶಿಕ್ಷಣ ನೀಡಲಾಗುತ್ತದೆ ಸಿಇಟಿ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
11 ರಿಂದ 30ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸಿಇಟಿ ಶುಲ್ಕ ಮಾತ್ರ ತೆಗೆದುಕೊಳ್ಳಲಾಗುತ್ತದೆ. 31 ರಿಂದ 60ನೇ ರ್ಯಾಂಕ್ ಪಡೆದ ಪಡೆದ ವಿದ್ಯಾರ್ಥಿಗಳಿಗೆ ಶೇಕಡ 25 ರಷ್ಟು ಸ್ಕಾಲರ್ಶಿಪ್ ಮತ್ತು ಟ್ಯೂಷನ್ ಶುಲ್ಕವನ್ನು ಮನ್ನ ಮಾಡಲಾಗುವುದು. 61 ರಿಂದ 100ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶೇಕಡ 10ರಷ್ಟು ಸ್ಕಾಲರ್ಶಿಪ್ ಮತ್ತು ಟ್ಯೂಷನ್ ಶುಲ್ಕವನ್ನು ಮನ್ನಮಾಡಲಾಗುವುದು. 101 ಮತ್ತು ಅದಕ್ಕಿಂತ ಹೆಚ್ಚಿನ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ 10 ಸಾವಿರ ರೂಪಾಯಿ ಲ್ಯಾಬ್ ಶುಲ್ಕ ಮನ್ನಾ ಮಾಡಲಾಗುತ್ತದೆ ಹೀಗೆ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳಿಗೂ ಒಂದಲ್ಲ ಒಂದು ರೀತಿ ಆರ್ಥಿಕ ಪ್ರಯೋಜನವಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ಮುಂದೆ ಬಂದಿದ್ದಾರೆ. ಬದುಕುಕಟ್ಟಿಕೊಂಡಿದ್ದಾರೆ. ಸ್ಕಾಲರ್ಶಿಪ್ ಟೆಸ್ಟಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಮತ್ತು ಊಟ-ತಿಂಡಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೆ 1,300ಕ್ಕೂ ಹೆಚ್ಚು ಜನ ನೊಂದಣಿ ಮಾಡಿಕೊಂಡಿದ್ದು ಶನಿವಾರದ ವೇಳೆಗೆ ಈ ಸಂಖ್ಯೆ 2,000 ಗಡಿ ದಾಟುವ ನಿರೀಕ್ಷೆ ಇದೆ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸಂಸ್ಥೆಯ ಸ್ಕಾಲರ್ಶಿಪ್ ಪ್ರಯೋಜನ ಪಡೆದ ಅನೇಕ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳು ದೇಶ ಮತ್ತು ಹೊರದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಹುದ್ದೆ ಪಡೆದಿದ್ದಾರೆ. ನಮ್ಮ ವಿದ್ಯಾರ್ಥಿಗಳಿಗೆ ಪ್ರಮುಖ ಕಂಪನಿಗಳಲ್ಲಿ ವಾರ್ಷಿಕ 5 ರಿಂದ 15 ಲಕ್ಷದವರೆಗೆ ವೇತನ ಸಿಗುತ್ತಿದೆ. ಇದರ ಫಲವಾಗಿ ಪ್ರತಿ ವರ್ಷ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾಗುತ್ತಿದೆ. ಅದೇ ರೀತಿ ಕಾಲೇಜಿನಲ್ಲಿ ವಿಶ್ವ ದರ್ಜೆಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಇನ್ನೂ ಪ್ರತಿ ಸೆಮಿಸ್ಟರ್ನಲ್ಲಿ 90 ಅಂಕಕ್ಕಿಂತ ಹೆಚ್ಚು ಅಂಕ ತೆಗೆಯುವ ವಿದ್ಯಾರ್ಥಿಗಳಿಗೆ 6,000 ಪ್ರೋತ್ಸಾಹ ಧನ ನೀಡಲಾಗುತ್ತಿದ್ದು ಒಬ್ಬ ವಿದ್ಯಾರ್ಥಿಗೆ ಒಟ್ಟು 48000 ಕೊಡುತ್ತಿದ್ದೇವೆ,ಪ್ರಸಕ್ತ ವರ್ಷ 400 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ.ಎನ್. ಚಂದ್ರಶೇಖರ್, ಶ್ರೀದೇವಿ ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ರಾಮಕೃಷ್ಣ ಹಾಜರಿದ್ದರು.
ವರದಿ : ಕೆ ಬಿ ಚಂದ್ರಚೂಡ್
