ಕೆ.ಆರ್.ಪೇಟೆ : ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಅಧ್ಯಕ್ಷರಾಗಿ ವಿ.ಕಿರಣ್ ಅವರು ಆಯ್ಕೆಯಾಗಿದ್ದಾರೆ.
ತಾಲ್ಲೂಕು ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷರಾಗಿದ್ದ ಸಮೀರ್ ಅವರು ಮೈಸೂರು ಜಿಲ್ಲಾ ಕರವೇ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಹೊಸಹೊಳಲು ವಿ.ಕಿರಣ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಕರವೇ ಸ್ವಾಭಿಮಾನಿ ಸೇನೆಯ ಮಂಡ್ಯ ಜಿಲ್ಲಾಧ್ಯಕ್ಷ ಎ.ಸಿ.ಕಾಂತರಾಜು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎ.ಸಿ.ಕಾಂತರಾಜು ಅವರು ಕರವೇ ಸ್ವಾಭಿಮಾನಿ ಸೇನೆಯ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿ.ಕಿರಣ್ ಅವರು ತಾಲ್ಲೂಕಿನಲ್ಲಿ ಸಂಘಟನೆಯ ಶಕ್ತಿಯನ್ನು ಹೆಚ್ಚಿಸಿ ಸಾಮಾಜಿಕ ಕಳಕಳಿಯುಳ್ಳ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಕನ್ನಡಪರ ಹೋರಾಟದಲ್ಲಿ ಸದಾ ನಿಮ್ಮೊಂದಿಗೆ ಜಿಲ್ಲಾ ಘಟಕವು ಇರುತ್ತದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ರಾಜ್ಯ ಘಟಕದ ಕಾನೂನು ಸಲಹೆಗಾರರಾಗಿ ಆಯ್ಕೆಯಾದ ವಕೀಲ ಆರ್.ಎಂ.ದೇವಾನಂದ್, ತಾಲ್ಲೂಕು ಘಟಕದ ಅಧ್ಯಕ್ಷ ವಿ.ಕಿರಣ್, ಕಾರ್ಮಿಕ ವಿಭಾಗದ ಅಧ್ಯಕ್ಷ ಅನ್ಸರ್ ಅಹಮದ್, ತಾಲ್ಲೂಕು ಗೌರವ ಸಲಹೆಗಾರ ಟೈಲರ್ ಸುಬ್ಬಣ್ಣ ಅವರನ್ನು ಅಭಿನಂದಿಸಲಾಯಿತು.

ತಾವು ಕಳೆದ 18ವರ್ಷಗಳಿಂದ ನಿರಂತರವಾಗಿ ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. ನಾಡುನುಡಿ, ನೆಲಜಲಕ್ಕಾಗಿ ಹಗಲಿರುಳು ಜೀವದ ಹಂಗು ತೊರೆದು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಮೊದಲು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಗರಡಿಯಲ್ಲಿ ಕನ್ನಡಪರ ಹೋರಾಟಕ್ಕೆ ಪಾದಾರ್ಪಣೆ ಮಾಡಿ ಹಲವು ವರ್ಷಗಳ ತಾಲ್ಲೂಕು ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಟಿ.ಎ.ನಾರಾಯಣಗೌಡರ ಸಮ್ಮುಖದಲ್ಲಿ ಗೌಡರ ಇಚ್ಚೆಯಂತೆ ಕುವೆಂಪು ಮಂತ್ರಮಾಂಗಲ್ಯದ ಮಾದರಿಯಲ್ಲಿ ಸರಳ ವಿವಾಹವಾಗಿ ಕರವೇ ನಾರಾಯಣಗೌಡರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿದ್ದೇನೆ.
ಪ್ರಸ್ತುತ ಕರವೇ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷರಾದ ನಿಂಗರಾಜೇಗೌಡರ ಜೊತೆ ಹೋರಾಟಕ್ಕೆ ದುಮುಕಿ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಕೆಲಸ ಮಾಡುತ್ತಾ ನಾಡು ನುಡಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ.
ನಮ್ಮ ಹೋರಾಟ ಅನ್ಯಾಯ, ಅಕ್ರಮದ ವಿರುದ್ದ ಯಾವುದೇ ರಾಜೀಯಿಲ್ಲದೆ ನಿರಂತರ ಚಳುವಳಿಯನ್ನು ಯಾವುದೇ ಮುಲಾಜಿಗೆ ಒಳಗಾಗದೇ ಮಾಡಿಕೊಂಡು ಬಂದಿದ್ದೇನೆ. ನಮ್ಮ ಜೊತೆಗೆ ಹತ್ತಾರು ವರ್ಷಗಳಿಂದ ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಸಮೀರ್ ಅವರನ್ನು ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲಾ ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷರನ್ನಾಗಿ ನಮ್ಮ ರಾಜ್ಯಾಧ್ಯಕ್ಷರಾದ ನಿಂಗರಾಜೇಗೌಡರು ನೇಮಕ ಮಾಡಿರುವುದು ನಮ್ಮ ಕೆ.ಆರ್.ಪೇಟೆ ತಾಲ್ಲೂಕಿಗೆ ಹೆಚ್ಚು ಗೌರವ ಬಂದಿರುತ್ತದೆ ಎಂದು ಎ.ಸಿ.ಕಾಂತರಾಜು ತಿಳಿಸಿದರು.
ಸಮೀರ್ ತಮಗೆ ವಹಿಸಿರುವ ಈ ಜವಾಬ್ದಾರಿಯನ್ನು ಅರಿತು ಮೈಸೂರು ಜಿಲ್ಲೆಯಲ್ಲಿ ನಾಡು-ನುಡಿ ನೆಲ ಜಲ ಹೋರಾಟದಲ್ಲಿ ನೂತನ ಜಿಲ್ಲಾಧ್ಯಕ್ಷ ಸಮೀರ್ ಕೆಲಸ ಮಾಡಿ ಇನ್ನೂ ಒಳ್ಳೆಯ ಹೆಸರು ಪಡೆಯಲಿ ಎಂದು ಶುಭ ಹಾರೈಸಿದರು. ಇದೇ ಜೂನ್ 1ರಂದು ರಾಜ್ಯಾಧ್ಯಕ್ಷರಾದ ನಿಂಗರಾಜೇಗೌಡರ ಹುಟ್ಟು ಹಬ್ಬ ಇರುವ ಕಾರಣ ಆ ದಿನ ಸರ್ಕಾರಿ ಶಾಲೆಗಳಿಗೆ ಬಣ್ಣ ಹೊಡೆಸಿಕೊಡುವ ಕಾರ್ಯಕ್ರಮ, ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮ ಬಡವರಿಗೆ ಮತ್ತು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮ ಕಾರ್ಯಕ್ರಮ ಹಮ್ಮಿಕೊಂಡು ಅರ್ಥಪೂರ್ಣವಾಗಿ ಕಾರ್ಯಕ್ರಮ ರೂಪಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂತರಾಜು ತಿಳಿಸಿದರು.
ನೂತನ ಕರವೇ ಸ್ವಾಭಿಮಾನಿ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಕಿರಣ್ ಮಾತನಾಡಿ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ನನ್ನ ಮೇಲೆ ವಿಶ್ವಾಸವಿಟ್ಟು ನೀಡಿರುವ ಜವಾಬ್ದಾರಿಯನ್ನು ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ ಕನ್ನಡ ನಾಡು ನುಡಿನೆಲ ಜಲದ ವಿಚಾರದ ಹೋರಾಟದಲ್ಲಿ ತೊಡಗಿಸಿಕೊಳ್ಳುತ್ತೇನೆ ತಾಲ್ಲೂಕಿನಲ್ಲಿ ಸಂಘಟನೆಯನ್ನು ಬಲಗೊಳಿಸುವ ದಿಕ್ಕಿನಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಅಮ್ಜದ್, ದಯಾನಂದರಾವ್, ಅಜ್ಜು, ಸಂತೇಬಾಚಹಳ್ಳಿ ಮಂಜುನಾಥ್, ದೇವರಾಜು, ಆಟೋ ವಾಸು, ಇರ್ಫಾನ್, ಕೆ.ಪಿ.ಮಂಜುನಾಥ್, ಮುರುಕನಹಳ್ಳಿ ಕಿರಣ್, ನಾಗರಾಜು, ವರದಣ್ಣ, ಲವಣ್ಣ, ಲೋಹಿತ್, ನಾಗಮಂಗಲ ತಾಲ್ಲೂಕು ಅಧ್ಯಕ್ಷ ರೋಹಿತ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
=========================
