ಕೊಳ್ಳೆಗಾಲ ಕಡೆಯಿಂದ ಒಂದಾನೊಂದು ಕಾಲದಲ್ಲಿ ನಮ್ಮೂರಿಗೆ ಬಂದಿದ್ದ ಕೆ.ದಾಸಪ್ಪನವರು ನಮ್ಮೂರಿನಲ್ಲಿ ಅಂದೇ ಒಂದು ಬಾರ್ ತೆರೆದು ಊರಿಗೆ ಬಾರಿ ಶ್ರೀಮಂತರಾಗಿದ್ದು ಹಳೇ ಮಾತಾಯಿತು. ಅವರು ತಮ್ಮ ಬಾರ್ ಪಕ್ಕದಲ್ಲೇ ಒಂದು ಸೈಟ್ನ್ನು ಖರೀದಿಸಿ ತಮ್ಮ ಹೆಸರಿಗೆ ಪಕ್ಕ ಖಾತೆ ಮಾಡಿಸಿಕೊಂಡಿದ್ದು ಆಯ್ತು. ಮುಂಭಾಗ ಮುಖ್ಯರಸ್ತೆಗೆ ಬಾರ್ಗೆ ಅಟ್ಯಾಚ್ ಆಗಿ ಹೋಟೆಲ್ ರೆಸ್ಟೋರೆಂಟ್ನ್ನು ಹಿಂಭಾಗ ವಾಸದ ಮನೆಯನ್ನು ಫಸ್ಟ್ ಫ್ಲೋರ್ನಲ್ಲಿ ಒಂದು ಮಿನಿ ಪಾರ್ಟಿ ಹಾಲ್ನ್ನು ಮಾಡಲು ತೀರ್ಮಾನಿಸಿ ಸಿವಿಲ್ ಇಂಜಿನಿಯರ್ ಕಡೆಯಿಂದ ಒಂದು ಪ್ಲಾನ್ ಮಾಡಿಸಿ ತಮ್ಮ ಪ್ಲಾಟ್ ನಿರ್ಮಿಸಿದರು. ಮನೆ ಗೃಹಪ್ರವೇಶ ಮಾತರ ಸಂಪ್ರದಾಯದಂತೆ ಮಾಡಿ ಮುಗಿಸಿದರು. ಆದರೆ ರೆಸ್ಟೋರೆಂಟ್ ಮಾಡಿದ ಬಗ್ಗೆ ಜನಸಾಮಾನ್ಯರಿಗೆ ತಿಳಿಯಪಡಿಸಿಬೇಕು.
ಬೀಗರ ಔತಣ ಮಾಡುವವರಿಗೆ ಪಾರ್ಟಿಹಾಲ್ನ್ನು ತೋರಿಸಬೇಕಲ್ಲ.. ಅದಕ್ಕೆ ತಮ್ಮ ದೋಸ್ತ್ ಯೂ ಟ್ಯೂಬರ್ ದ್ಯಾವುಗೆ ಕರೆ ಮಾಡಿ ಕರೆಸಿಕೊಂಡರು. ತಮ್ಮ ಹಳೆಯ ಬಾರ್ ಗಿರಾಕಿಗಳ ಜೊತೆಗೆ ಹೊಸದಾಗಿ ನಾನ್ ವೆಜ್ ಗಿರಾಕಿಗಳನ್ನು ಮಿಲ್ಟ್ರಿ ಹೋಟೆಲ್ನತ್ತ ಸೆಳೆಯಲು ಸಭೆ ಸಮಾರಂಭ ಮಾದರಿ ಒಂದು ಕಾರ್ಯಕ್ರಮ ಏರ್ಪಡಿಸಬೇಕೆಂಬುದು ಅವರ ದೂರದ ಆಲೋಚನೆ. ಪೇಪರ್ ಗಳಲ್ಲಿ ಸುದ್ದಿಯಾಗಬೇಕು ನ್ಯೂಸ್ ಚಾನಲ್ ಗಳಲ್ಲಿ ಬ್ರೇಕಿಂಗ್ ಸುದ್ಧಿಯಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಡಬೇಕು.. ಹೀಗೆ ಅವರ ಮನಸ್ಸಿನ ಆಲೋಚನೆ ಇತ್ತಾಗಿ ಅದಕ್ಕಾಗಿ ಏನು ಮಾಡಬೇಕು ಎಂದು ತಿಳಿಯಲು ದ್ಯಾವುಗೆ ಸಲಹೆ ಕೇಳಿದರು. ನನಗೆ ಮ್ಯಾರೇಜ್ ಈವೆಂಟ್ ತರಹ ಎಲ್ಲಾ ವಹಿಸಿಕೊಡುವಿರಾ. ಇಲ್ಲಾ ನೀವೇ ತರಕಾರಿ ತರಿಸಿ ಅಡಿಗೆ ಬಟ್ಟರಿಗೆ ಪೇಮೆಂಟ್ ಫಿಕ್ಸ್ ಮಾಡುವ ರೀತಿ ಮಾಡುವಿರಾ..? ಪ್ರಶ್ನೆ ಎಸೆದನು ದ್ಯಾವು.
“ಅದೆಲ್ಲಾ ನನಗೆ ತಲೆಗೆ ಹೋಗಲ್ಲ. ಒಟ್ಟಾರೆ ಕಡಿಮೆ ಬಡ್ಜೆಟ್ನಲ್ಲಿ ಅದ್ಧೂರಿ ಪಾರ್ಟಿ ಆಗಬೇಕು. ನನ್ನ ಹೋಟೆಲ್ಗೆ ಗಿರಾಕಿ ಬರಬೇಕು ಅಷ್ಟೇ.. ಎಂದರು ದಾಸಪ್ಪನವರು. “ ಸರಿ, ನಾನು ಟಿವಿಗಳಲ್ಲಿ ಬರುವ ಕಾಮಿಡಿ ಕಿಲಾಡಿಗಳು ತರಹ ಒಂದು ಹಾಸ್ಯ ಸಂಜೆ ಕಾರ್ಯಕ್ರಮ ಏರ್ಪಡಿಸುವೆ. ಹಾಗೆಂದು ಆ ಕಲಾವಿದರನ್ನು ಕರೆಸಿ ಸ್ಕಿಟ್ ಮಾಡಿಸುವುದಿಲ್ಲ. ಈ ಬದಲು ಮಾತು ಮಾತಿಗೂ ನಗಿಸಲು ಶ್ರಮಿಸುವ ಪ್ರಸಿದ್ದ ಹಾಸ್ಯ ಭಾಷಣಕಾರರನ್ನು. ಚಿತ್ರನಟರ ಧ್ವನಿಯನ್ನು ಅನುಕರಿಸಿ ನಗಿಸುವ ಮಿಮಿಕ್ರಿ ಕಲಾವಿದರನ್ನು, ಹನಿಗವನಗಳಿಂದ ಸವಿಜೇನು ಉಣಬಡಿಸುವ ಚುಟುಕು ಕವಿಗಳನ್ನು ಕಡಿಮೆ ಪೇಮೆಂಟ್ಗೆ ಕರೆಸುತ್ತೇನೆ. ಒಟ್ಟು ಕಾರ್ಯಕ್ರಮದ ಖರ್ಚಿನ ಬಡ್ಜೆಟ್ ನಿಮ್ಮ ಮುಂದೆ ಈಗ ಲೆಕ್ಕ ಹಾಕಿ ಮಂಡಿಸುತ್ತೇನೆ, ಒಂದು ಪೆಗ್ ವ್ಹಿಸ್ಕಿಗೆ ಆರ್ಡರ್ ಮಾಡಿ ಎಂದನು ದೇವು.
“ ಬಡ್ಜೆಟ್ಗೆ ತಕ್ಕಂತೆ ಮಂದಿ ಬರದಿದ್ದರೆ ನಿನ್ನ ನಂಬಿ ನನಗೆ ನಷ್ಟ ಆದರೆ ತುಂಬಾ ಕಷ್ಟ..ಎಂದು ರಾಗ ಎಳೆದರು ದಾಸಪ್ಪನವರು.
“ನೋಡಿ ದಾಸಪ್ಪನವರೇ, ವ್ಯಾಪಾರ ಎಂದ ಮೇಲೇ ಲಾಭ ನಷ್ಟ ಇದ್ದಿದ್ದೆ. ನೀವು ಬಾರ್ ಮಾಡಿ ಊರಿಗೆ ನಂಬರ್ ಒನ್ ಕುಳ ಆಗಿದ್ದೀರಿ. ಈಗ ರೆಸ್ಟೋರೆಂಟ್ ತೆರೆದು ಜನರಿಗೆ ಶುಚಿರುಚಿ ಊಟ ಬಡಿಸಲು ಹೊರಟ್ಟಿದ್ದೀರಿ. ಊಟದ ರುಚಿಯನ್ನು ಗ್ರಹಿಸುವುದು ಯಾವುದು ನೀವೇ ಹೇಳಿ ಎಂದು ಮೊದಲ ಪ್ರಶ್ನೆ ಎಸೆದು ಮೊದಲ ಪೆಗ್ ಎತ್ತಿ ಚಿರ್ಸ್ ಎಂದನು ದ್ಯಾವು.
ಬಹಳ ತಲೆ ಕೆಡಿಸಿಕೊಂಡು ಯೋಚಿಸಿ ದಾಸಪ್ಪನವರು “ಮೂಗು ಅಲ್ಲವೇ..! ಎಂದರು. “ಅಲ್ಲ ಮೂಗು ವಾಸನೆ ಮಾತ್ರ ಗ್ರಹಿಸುವುದು.. ಎಂದ ದ್ಯಾವು ಈಗ ನನಗೆ ಎರಡನೇ ಪೆಗ್ ತರಿಸಿ ಎಂದನು. ಸದ್ಯಕ್ಕೆ ನೆಂಚಿಕೊಳ್ಳಲು ಕಾರ, ಆಮ್ಲೇಟ್ ಸಾಕು.. ಎಂದನು.
“ಹಾಂ! ನನಗೀಗ ಹೊಳೆಯಿತು ರುಚಿಯನ್ನು ಗ್ರಹಿಸುವುದು ನಾಲಿಗೆ..! ಎಂದು ಖುಷಿಯಲ್ಲಿ ಚಪ್ಪಾಳೆ ಹೊಡೆದುಕೊಂಡು ಆತುರದಲ್ಲಿ ನಾಲಿಗೆ ಕಚ್ಚಿಕೊಂಡರು ದಾಸಪ್ಪನವರು
“ಮೂಗು ನಾಲಿಗೆ ಎರಡೂ ಓಕೆ. ಆದರೆ ಇದನ್ನು ಕಂಟ್ರೋಲ್ ಮಾಡುವುದು ಯಾವುದು? ಮತ್ತೊಂದು ಪ್ರಶ್ನೆ ಎಸೆದು ಸೆಕೆಂಡ್ ರೌಂಡ್ಗೆ ಸಿದ್ಧನಾದನು ದ್ಯಾವು. “ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆಯುತ್ತಿದ್ದರೇ ಹೇಗೆ? ಬೇಸರ ವ್ಯಕ್ತಪಡಿಸಿದರು ದಾಸಪ್ಪನವರು.
“ ಬೇಸರ ಬೇಡಿ ದಾಸಪ್ಪನವರೇ, ನಿಮ್ಮ ಉತ್ತರದಲ್ಲೇ ಪ್ರಶ್ನೆ ಇದೆ. ನಿಮ್ಮ ತಲೆಯಲ್ಲೇ ಮೂಗು, ನಾಲಿಗೆ ಎರಡೂ ಇದೆ ಹೌದಲ್ಲವೋ? ನಿಮ್ಮ ಹಳ್ಳಿಮನೆ ಬಾಡೂಟ ಚೆನ್ನಾಗಿದೆ ಎಂದು ನಿಮ್ಮನ್ನು ಹೊಗಳುವುದು ಬಾಯಿ ತಾನೇ..! ನಕ್ಕು ಆಮ್ಲೇಟ್ ಬಾಯಿಗೆ ತುರುಕಿದನು ದ್ಯಾವು. ಹಾಂ.! ಇನ್ನೂ ಒಂದಿದೆ ಅದೇನು? ಕೌತುಕದ ಪ್ರಶ್ನೆ ಎಸೆದನು. ತಲೆಯೊಳಗೆ ಇನ್ನೇನಿದೆ ಎಂದು ಯೋಚಿಸಿ ಹಾಂ! ಮೆದುಳು ಎಂದರು ದಾಸಪ್ಪನವರು.
“ ಸರಿ, ನನಗೀಗ ಮೀನಿನ ತಲೆ ತರಿಸಿ. ನಿಮ್ಮ ರೆಸ್ಟೋರೆಂಟಿನ ಮೇಲ್ಗಡೆ ಇರುವ ಪಾರ್ಟಿಹಾಲ್ನಲ್ಲಿ ನಡೆಯುವ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ನಮ್ಮ ಹಾಸ್ಯಗಾರರು ಜನರನ್ನು ನಕ್ಕು ನಗಿಸಿ ಅವರ ಮೆದುಳನ್ನು ತೊಳೆಯುವರು.. “ದೇವು, ಮೆದುಳನ್ನು ಹೇಗೆ ತೊಳೆಯುವುದು? ಅದು ತಲೆಯೊಳಗೆ ಇರುವುದಲ್ಲ? ಈಗ ಪ್ರಶ್ನೆ ಕೇಳುವ ಸರದಿ ದಾಸಪ್ಪನದು.
“ ಅಯ್ಯೋ ದಾಸಪ್ಪ, ಮೆದುಳನ್ನು ತೊಳೆಯುವುದು ಎಂದರೆ ಜನರ ಮನಸ್ಸನ್ನು ಹರುಷಗೊಳಿಸುವುದು ಅರ್ಥಾತ್ ತಿಳಿಗೊಳಿಸುವುದು.
ದ್ಯಾವು ನನಗೊಂದು ಅನುಮಾನ! ಈಗ ಹೇಳಿದೆಯೆಲ್ಲಾ ಮನಸ್ಸು ಅದು ಎಲ್ಲಿ ಇರುವುದು? ತಲೆಯೊಳಗಾ ಇಲ್ಲಾ ಮೆದುಳಿನೊಳಗಾ?
“ ಈ ಪ್ರಶ್ನೆಗೆ ಮನೋವೈದ್ಯರನ್ನು ಭೇಟಿ ಮಾಡಿ ಉತ್ತರ ಕಂಡುಕೋ. ಈಗ ನನ್ನ ಪುಕ್ಕಟ್ಟೆ ಸಲಹೆಗೆ ಕುಡಿದ ಡ್ರಿಂಕ್ಸ್ ತಿಂದ ಫಿಶ್ ಆಮ್ಲೇಟ್ ಬಿಲ್ಲನ್ನು ನೀನೇ ಪೇ ಮಾಡು.. ಎಂದು ಪುಕ್ಕಟ್ಟೆ ಟಿಷ್ಯೂ ಪೇಪರ್ ನಿಂದ ತುಟಿ ಒರೆಸಿಕೊಂಡೆನು. ದ್ಯಾವುನ ಮಾರ್ಗದರ್ಶನದಂತೆ ದಾಸಪ್ಪನವರು ಒಂದು ಹಾಲಿಡೆ ಪಾರ್ಟಿ ಹಾಲ್ನಲ್ಲಿ ರೆಗ್ಯುಲರ್ ಗಿರಾಕಿಗಳ ಜೊತೆಗೆ ಹೊಸ ಗಿರಾಕಿಗಳಿಗದೂ ಆಹ್ವಾನ ಪತ್ರ ನೀಡಿ ಅಂತೂ ಪಾರ್ಟಿ ಹಾಲ್ ಭರ್ತಿ ಮಾಡಿದರು.
ಮಹಾನ್ ಕುಡುಕ ಕರಿಯಪ್ಪನವರು ಸಭೆಯನ್ನು ಉದ್ಘಾಟಿಸಬೇಕೆಂದು ನಿರೂಪಕಿ ಕೋರಿದರು. ಕರಿಯಪ್ಪ ವೇದಿಕೆಯ ಕುಳಿತ ಜಾಗದಿಂದ ಪೋಡಿಯಂ ಬಾಕ್ಸ್ನತ್ತ ಬರುತ್ತಿರಲು ಐಯಾಮ್ ವೆರಿ ಸಾರಿ.. ಉದ್ಘಾಟನೆಗೂ ಮೊದಲು ಪ್ರಾರ್ಥನೆ ಆಗದಿದರೆ ತೀರ್ಥ ತೆಗೆದುಕೊಳ್ಳುವರೆಗೂ ಬೇಸರವಾಗುವುದು. ಕ್ಷಮಿಸಿ, ಈಗ ಬಾರೆ ಹೊಸೂರಿನಿಂದ ಬಂದಿರುವ ಸಣ್ಣಳ್ಳಿಯವರು ಪ್ರಾರ್ಥನೆ ಗೀತೆ ಹಾಡುವರು..
ತೆರೆದಿದೆ ಬಾರು ಕುಡಿಯುವ ಬಾರೋ
ತೆರೆಯಿರಿ ಬಾಯಿ ಕುಡಿಯಿರಿ ಹೀರೋ
ಗೀತೆಯ ಎರಡು ಪ್ರಾಸಬದ್ಧ ಸಾಲನ್ನು ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಪೇಸ್ ಬುಕ್ ನಲ್ಲಿ ಲೈವ್ ಪ್ರಸಾರ ಮಾಡಿದನು ದೇವು.
ಸಣ್ಣಳ್ಳಿ ಪ್ರಾರ್ಥನೆಗೆ ಕೆಲವು ಜನ ಬೇಷ್ ಎಂದರೆ ಮತ್ತೇ ಕೆಲವರು ಒನ್ಸ್ಮೋರ್ ಎಂದು ಕೂಗಿದರು. ಆಗ ಜೆಂಟ್ಸ್ ನಿರೂಪಕರು ಆಗಮಿಸಿ ಗಾಯಕರು ಸಭೆಯ ಮಧ್ಯೆಮಧ್ಯೆ ಮದ್ಯ ಸರಬರಾಜು ಮಾಡುವ ವೇಳೆ ಹಾಡುವರು. ಈಗ ಸಭೆಯ ಉದ್ಘಾಟನೆಯನ್ನು ಕರಿಯಪ್ಪನವರು ಮಾಡುವರು ಎಂದಳಾಕೆ. ಪೋಡಿಯಂ ಬಾಕ್ಸ್ನತ್ತ ಬಂದ ಕರಿಯಪ್ಪನವರ ಕೈಗೆ ಬೀರು ಬಾಟ್ಳಿಯನ್ನು ಕೊಟ್ಟರು. ಮುಚ್ಚಳ ತೆರೆಯಲು ಆ ಸಂದರ್ಭದಲ್ಲಿ ಯಾವ ಹತಾರವೂ ಕೂಡಲೇ ಸಿಗಲಿಲ್ಲವಾಗಿ ಕರಿಯಪ್ಪನವರೇ ತಮ್ಮ ಅನುಭವದ ಮೇಲೆ ಬಾಟ್ಳಿಯ ಮುಚ್ಚಳವನ್ನು ತನ್ನ ಹುಳುಕು ದವಡೆ ಹಲ್ಲಿನಿಂದ ಕಿತ್ತು ಉಗಿಯುತ್ತಿದ್ದಂತೆ ಬೀರು ಬಾಟಲಿನಿಂದ ಬುರುಬುರು ನೊರೆ ಉಕ್ಕಿತು. ನೆರೆದಿದ್ದವರ ಬಾಯಲ್ಲಿ ಸೊರಸೊರ ಜೊಲ್ಲು ಸೋರಿತು. ದಾಸಪ್ಪನ ಬಾರ್ ಕೆಲಸಗಾರರು ಸಭೆಯಲ್ಲಿದ್ದ ಎಲ್ಲರಿಗೂ ಮೊದಲನೇ ರೌಂಡಿನ ನೈಂಟಿಯನ್ನು ಸರಬರಾಜು ಮಾಡಿದರು. ಕುಡುಕ ಕರಿಯಪ್ಪ ಹಳೆಯ ಪೀಲಂ ವಿಲನ್ ನಾಗಪ್ಪನವರ ಶೈಲಿ ಅನುಕರಿಸಿ ತಮ್ಮ ಭಾಷಣ ಆರಂಭಿಸಿದರು.
“ಸನ್ಮಾನ್ಯ ಕುಡುಕ ಮಿತ್ರರೇ, ನನಗೆ ಬರೆಯಲು ಪೆನ್ ಬೇಕು. ಪೆನ್ ಮತ್ತು ರಮ್ ಇವರೆಡು ನನ್ನ ಬಳಿ ಇದ್ದರೇ ದಿನಕ್ಕೆ ಇಪ್ಪತ್ತು ಪುಟ ಬರೆಯುವ ತಾಕತ್ತು ನನಗಿದೆ. ಟ್ವೆಂಟಿ ಟ್ವೆಂಟಿ ಮ್ಯಾಚ್ ಮುಗಿದು ಇಪ್ಪತ್ತು ಆಟಗಾರರು ಔಟ್ ಆಗುವುಷ್ಟರಲ್ಲಿ ನಾನು ಇಪ್ಪತ್ತು ಪುಟ ಬರೆಯಬಲ್ಲೇ. ಆದರೇ ಎರಡು ಪುಟಕ್ಕೊಮ್ಮೆ ಒಂದು ಸಿಗರೇಟು ನನಗೆ ಬೇಕೇ ಬೇಕು..
“ನಾವು ಔಟ್ ಆಗುವಷ್ಟರಲ್ಲಿ ನಮಗೂ ಬೇಕು ಸಿಗರೇಟು.. ಸಭೆಯ ಮಧ್ಯೆ ಧ್ವನಿಯೊಂದು ತೂರಿ ಬಂತು.
“ಯಾರಪ್ಪ ಅದು, ನಮ್ಮ ಅಭಿಮಾನಿಗಳಿಗೆ ಮೊದಲು ಅವರ ಬೇಡಿಕೆಯನ್ನು ಪೂರೈಸಿ.. ಎಂದು ಕರಿಯಪ್ಪನವರು ದಾಸಪ್ಪನವರತ್ತ ಮುಖ ಮಾಡಲು ಆಯ್ತು ಬುದ್ದಿ..ಎಂದು ತಮ್ಮ ಶಿಷ್ಯೋತ್ತಮರಿಗೆ ಆ ಕೂಡಲೇ ಆಜ್ಞಾಪಿಸಿದರು.
—
ಗೊರೂರು ಅನಂತರಾಜು, ಹಾಸನ.
ಮೊ:9449462879.
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3ನೇ ಕ್ರಾಸ್, ಹಾಸನ-573201.
