ತುಮಕೂರು: ಯುವಶಕ್ತಿಯು ಸಮಾಜದ ಅಮೂಲ್ಯ ರತ್ನಗಳಿದ್ದಂತೆ. ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆಗೆ ಅಂತರಜಾಲಕ್ಕಿಂತ ಅಂತರಾತ್ಮದ ಅರಿವು ಮತ್ತು ಸೇವಾ ಮನೋಭಾವದ ಬೆಲೆ ಜಾಸ್ತಿಯಾಗಬೇಕಾಗಿದೆ ಎಂದು ಬೆಳ್ಳಾವಿಯ ಶ್ರೀ ಕಾರದೇಶ್ವರ ಮಠದ ಅಧ್ಯಕ್ಷರಾದ ಶ್ರೀ ಕಾರದ ವೀರಬಸವ ಮಹಾಸ್ವಾಮಿ ಅವರು ಕರೆ ನೀಡಿದರು.
ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ ಕಾಲೇಜಿನ ವತಿಯಿಂದ ಬೆಳ್ಳಾವಿಯ ಶ್ರೀ ಕಾರದೇಶ್ವರ ಮಠದ ಆವರಣದಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಎನ್ಎಸ್ಎಸ್ ಶಿಬಿರ ಎಂದರೆ ಕೇವಲ ಶ್ರಮದಾನವಲ್ಲ; ಕಷ್ಟದ ಸಂದರ್ಭಗಳನ್ನೂ ಸರಳವಾಗಿ ಸ್ವೀಕರಿಸಿ, ಅದರಿಂದ ಕಲಿಯುವುದೇ ನಿಜವಾದ ಸೇವೆ. ಸಮಾಜದಲ್ಲಿ ನದಿ, ವೃಕ್ಷ ಹಾಗೂ ಗೋವುಗಳು ನಿಸ್ವಾರ್ಥವಾಗಿ ಪರರ ಉಪಕಾರಕ್ಕಾಗಿ ಬದುಕುತ್ತಿರುವಾಗ, ಬುದ್ಧಿವಂತನಾದ ಮನುಷ್ಯ ಸಮಾಜಮುಖಿಯಾಗಿ ಬದುಕುವುದನ್ನು ಕಲಿಯಬೇಕು ಎಂದರು.
ಹದಿಹರೆಯದ ಅಥವಾ ಟೀನೇಜ್ ವಯಸ್ಸು ಅತ್ಯಂತ ಜಾಗರೂಕತೆಯಿಂದ ಕಳೆಯಬೇಕಾದ ಅಮೂಲ್ಯ ಸಮಯವಾಗಿದ್ದು, ವಿದ್ಯಾರ್ಥಿಗಳು ಮೊಬೈಲ್ ವ್ಯಾಮೋಹದಿಂದ ಹೊರಬಂದು ಸಕಾರಾತ್ಮಕ ಯೋಚನೆಗಳೊಂದಿಗೆ ಹೆತ್ತ ತಂದೆ-ತಾಯಂದಿರನ್ನು ಗೌರವಿಸಿ, ಸೇವೆ ಮಾಡಬೇಕು ಎಂದು ನುಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿ-ಟೆಕ್ ಸೊಲ್ಯುಷನ್ಸ್ ವ್ಯವಸ್ಥಾಪಕ ನಿರ್ದೇಶಕರಾದ ನಾಗಪ್ರಿಯ ಕೆ.ಜೆ ಅವರು, ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸೇವಾ ಮನೋಭಾವ ಅತ್ಯಗತ್ಯ. ಇಂತಹ ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶ್ರಮದ ಗೌರವವನ್ನು ಹೆಚ್ಚಿಸುತ್ತವೆ. ಪ್ರತಿಯೊಬ್ಬ ಶಿಬಿರಾರ್ಥಿಯೂ ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಮಾದರಿ ಯುವಕರಾಗಿ ಹೊರಹೊಮ್ಮಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವೈಸಿರಿ ಕಾಲೇಜಿನ ಪ್ರಾಂಶುಪಾಲರಾದ ಹುಮೇರ ಪರ್ವೀನ್ ಅವರು, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಹಾಗೂ ಸಾಮೂಹಿಕ ಜವಾಬ್ದಾರಿಯನ್ನು ಬೆಳೆಸುತ್ತದೆ. ಹಳ್ಳಿಗಳ ಉದ್ಧಾರದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ವಿದ್ಯಾರ್ಥಿಗಳು ಶಿಬಿರದ ಅವಧಿಯಲ್ಲಿ ಗ್ರಾಮಸ್ಥರೊಂದಿಗೆ ಬೆರೆತು, ಇಲ್ಲಿನ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಶಿಸ್ತುಬದ್ಧ ದಿನಚರಿಯನ್ನು ಪಾಲಿಸಬೇಕು. ಮಠದ ಪವಿತ್ರ ವಾತಾವರಣದಲ್ಲಿ ಸಿಕ್ಕಿರುವ ಈ ಸೇವಾ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಅರವಿಂದ ಇ, ಸಂಜಯ್ ಡಿ ಹಾಗೂ ಅಭಿಲಾಷ ಎಸ್ ಸೇರಿದಂತೆ ಶಿಬಿರಾರ್ಥಿಗಳು ಹಾಗೂ ಮಠದ ಪ್ರಮುಖರು ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
