ತೃತೀಯ ಲಿಂಗಿಗಳ ಬದುಕಿನ ಅನಾವರಣ. ಅವರ ಮಾನಸಿಕ ತೊಳಲಾಟಗಳು , ಬದುಕಿನೊಂದಿಗೆ ಹೋರಾಟ , ಸಂಬಂಧಗಳ ತುಡಿತ ವಸ್ತು ವಿಷಯಗಳನ್ನು ಹೊತ್ತಂತಹಾ ಕಾದಂಬರಿ ಹೊಸಬೆಳಗು.
ಶ್ರೀಮತಿ ಶೈಲಜಾ ಹಾಸನ್ ರವರ ಹೊಸಬೆಳಗು ಕಾದಂಬರಿ. ಬರೀ ಕಾದಂಬರಿ ಯಾಗಿ ಉಳಿಯದೇ , ಕಲ್ಪನೆಯಲ್ಲಿ ವಿಹರಿಸದೇ ಬದುಕಿನ ವಾಸ್ತವದೊಂದಿಗೆ ಮುನ್ನಡೆಸುತ್ತಾ ಕಾದಂಬರಿ ಹೆಣೆದ ರೀತಿ ನಿಜಕ್ಕೂ ಅತ್ಯದ್ಭುತ ವಾಗಿ ಮೂಡಿ ಬಂದಿದೆ.
ದೊಡ್ಡಪ್ಪ, ದೊಡ್ಡಮ್ಮ , ಅಕ್ಕ ತಂಗಿಯರು , , ತಂದೆ ತಾಯಿ ಯೊಂದಿಗೆ ಪ್ರೀತಿಯ ಸವಿ ಉಂಡಂತಹಾ ಒಬ್ಬ ಪುಟ್ಟ ಮೃದು ಹೃದಯಿ ಹುಡುಗ ಬೆಳೆಯುತ್ತಾ ಹೋದಂತೆ ತನ್ನಲ್ಲಿನ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳನ್ನು ತನಗೇ ಅರಿಯದಂತೆ ಇತರರು ಗಮನಿಸಿ ತನ್ನನ್ನು ನೋಡುವ ರೀತಿ ನೋಡಿ ಇಂಟರ್ನೆಟ್ ಮುಖಾಂತರ ತನ್ನ ಬದಲಾವಣೆಗೆ ಕಾರಣ ಹುಡುಕಿಕೊಂಡು ತಾನು ವಾಸ್ತವದಲ್ಲಿ ಅವನಾ.. ಅವಳಾ.. ಎಂಬ ಪ್ರಶ್ನೆಗೆ ಉತ್ತರ ಪಡೆಯುವುದು ಹರಸಾಹಸವೇ ಸೈ. ಅರಿತಾಗ್ಯೂ ತನ್ನಲ್ಲಿ ಬಲವಂತವಾಗಿ ಬದಲಾವಣೆ ತರಲು ಪ್ರಯತ್ನಿಸುವ ತಾಯಿಯ ಪ್ರೀತಿಯನ್ನು ಕಂಡು ಮರುಗುವ ಮತ್ತು ತನ್ನ ಅಸಹಾಯಕತೆಗೆ ಕೋಪಗೊಳ್ಳಬೇಕೋ , ಇರುವುದನ್ನು ಇದ್ದಂತೆ ಒಪ್ಪಿಕೊಳ್ಳಬೇಕೋ ಅರ್ಥೈಸಲಾಗದ ಪರಿಸ್ಥಿತಿ ಕಥಾನಾಯಕ ( ನಾಯಕಿ ) ದು.
ಅತೀ ಹತ್ತಿರದ ಮತ್ತು ಒಂದೇ ಕೂಡು ಕುಟುಂಬದಲ್ಲಿ ಬರೀ ಹೆಣ್ಣು ಮಕ್ಕಳೊಡನೆ ಬೆರೆತು ಬೆಳೆದ ನಾಯಕ ದಿನ ಕಳೆದಂತೆಲ್ಲಾ ಹೆಚ್ಚು ಸಮಯ ಹೆಣ್ಣು ಮಕ್ಕಳೊಂದಿಗೇ ಕಳೆದು ಅವರ ಒಡನಾಟದಲ್ಲಿ ಇದ್ದ ಅವನಿಗೆ ಸಹಜವಾಗಿ ಹೆಣ್ಣಿನಂತೆ ನಡೆದುಕೊಳ್ಳುವುದು ಬಂದು ಬಿಟ್ಟಿದೆ ಎಂದು ಅರಿತ ತಾಯಿ ಅವನಿಗಾಗಿ ಕಿರಿ ಕಿರಿ ಅನುಭವಿಸುವ ರೀತಿ ಕಂಡು ಕೂಡು ಕುಟುಂಬ ಬೇರೆ ಬೇರೆ ಯಾಗುತ್ತದೆ. ಆದರೂ ಪಕ್ಕದಲ್ಲೇ ಇರುವ ಅವರ ಒಡನಾಟ ಕಡಿಮೆ ಆಗುವುದಿಲ್ಲ. ಅಕ್ಕಂದಿರ ಬಟ್ಟೆಗಳನ್ನು ತೊಟ್ಟು ಹೆಣ್ಣು ಮಕ್ಕಳಂತೆ ಅಲಂಕರಿಸಿಕೊಂಡು ಬಳುಕುತ್ತಾ ನಡೆಯುವ ಅವನನ್ನು ಕಂಡು ಹೆದರಿದ ತಾಯಿ ಅವನನ್ನು ತನ್ನ ಒಡಹುಟ್ಟಿದ ಅಣ್ಣನ ಮನೆಗೆ ಕಳಿಸಿ ಓದಿಸುವುದು. ಅಲ್ಲಿಯೂ ಕೂಡ ಅವನ ರೀತಿ ಬದಲಾಗದೇ ಇರುವುದು ಬಹಳ ನಿಧಾನವಾಗಿ ಕಂಡು ಬರುತ್ತದೆ.
ಯಾರಾದರೂ ಗಂಡು ಮಕ್ಕಳು ಮುಟ್ಟಿದರೆ ಹೆದರುವ ನಾಯಕ ಹೆಣ್ಣು ಮಕ್ಕಳೊಂದಿಗೆ ಬೆರೆಯಲು ಇಷ್ಟ ಪಡುತ್ತಾನೆ. ಆದಾಗ್ಯೂ ಒಮ್ಮೆ ಅವನ ಸ್ನೇಹಿತರು ಅವನನ್ನು ಕರೆದುಕೊಂಡು ಹೋಗಿ ಬಲವಂತವಾಗಿ ಕುಡಿಸಿ ಅತ್ಯಾಚಾರ ಮಾಡಿದ್ದು ಆಘಾತ ತರುತ್ತದೆ. ಇದೆಲ್ಲಾ ನಮ್ಮ ನಿಮ್ಮ ನಡುವೆ ನಡೆಯುವ ಸಾಮಾನ್ಯ ಸಂಗತಿಯಾಗಿದೆ.
ಅವನನ್ನು ಹೆಣ್ಣಿಗ ಎಂದು ಕರೆದರೂ ಅದನ್ನು ಸ್ವೀಕರಿಸುತ್ತಾ ಪ್ರತಿ ದಿನವೂ ಹೆಣ್ಣು ಮಕ್ಕಳೊಂದಿಗೆ ಆಟವಾಡುತ್ತಾ ಹೆಚ್ಚು ಸಮಯ ಕಳೆಯುತ್ತಾನೆ.
ಒಮ್ಮೆ ಕಾಲೇಜಿನಲ್ಲಿ ಕಾರ್ಯಕ್ರಮವೊಂದರ ನಿರೂಪಣೆ ಮಾಡಬೇಕಾದಾಗ ಹೆಣ್ಣಿನ ವೇಷ ಧರಿಸಿ ನಿರೂಪಣೆ ಮಾಡಬೇಕಾಗುತ್ತದೆ. ಆಗ ಎಲ್ಲರೂ ಇವನ ಹೆಸರನ್ನು ಆಯ್ಕೆ ಮಾಡುತ್ತಾರೆ. ನಂತರ ಕಾರ್ಯಕ್ರಮದ ನಿರೂಪಣೆಯನ್ನು ಬಹಳ ಚೆಂದವಾಗಿ ಮುಗಿಸಿ ಮನೆಗೆ ಅದೇ ವೇಷದಲ್ಲಿ ಬಂದಾಗ ಇದ್ದಕ್ಕಿದ್ದಂತೆ ತಾಯಿಯ ಆಗಮನವಾಗಿರುತ್ತದೆ. ಅವನನ್ನು ( ಅವಳನ್ನು) ಕಂಡು ಕಣ್ಣಿನಲ್ಲೇ ಕಿಡಿ ಕಾರುವ ತಾಯಿಯ ದೃಷ್ಟಿಯನ್ನು ತಪ್ಪಿಸಿ ಕೋಣೆ ಸೇರಿ ತನ್ನ ವರ್ತನೆಗೆ ಇಂಟರ್ನೆಟ್ ಮುಖಾಂತರ ಕಾರಣ ಹುಡುಕಿದಾಗ ಅವನಿಗೆ ತಾನು ಅವನಲ್ಲ.. ಅವಳು..!! ಎಂಬ ಕಟು ಸತ್ಯದ ಅರಿವಾಗುತ್ತದೆ. ದಿಗ್ಭ್ರಮೆಯಿಂದ ಕೋಣೆಯಿಂದ ಹೊರಗೇ ಬರದೆ ತಾಯಿಯ ನೋಟಕ್ಕೆ ಸಿಲುಕದೆ ಒಳಗೇ ಉಳಿಯುತ್ತಾನೆ. ಅಲ್ಲಿಂದ ಅವನ ( ಳ ) ಹೋರಾಟ ಪ್ರಾರಂಭವಾಗುತ್ತದೆ. ಜೊತೆಯವರೊಡನೆ , ಕುಟುಂಬದವರೊಡನೆ ತಲೆ ಎತ್ತಿ ಇರಲಾರದಂತಹ ಪರಿಸ್ಥಿತಿ ಆಕೆಯದು. ನಿಧಾನವಾಗಿಯಾದರೂ ಎಲ್ಲರೂ ಅವಳನ್ನು ಒಪ್ಪಿಕೊಂಡರೂ ತಾಯಿಯ ಆತ್ಮಹತ್ಯೆ ಅವಳನ್ನು ಜರ್ಜರಿತಗೊಳಿಸುತ್ತದೆ. ಅವಳ ಸಾವಿಗೆ ತಾನೇ ಕಾರಣನೆಂಬ ಸತ್ಯ ಅರಗಿಸಿಕೊಳ್ಳಲಾಗದೆ ಮನೆ ಬಿಟ್ಟು ಹೊರಟ ನಾಯಕಿ ಸಾಯುವ ತೀರ್ಮಾನ ಕೈಗೊಂಡಾಗ ಅಲ್ಲಿಯೂ ವಿಧಿಯಾಟ ತನ್ನ ಅಟ್ಟಹಾಸವನ್ನು ಮೆರೆದು ಅವಳನ್ನು ಉಳಿಸಿಬಿಡುತ್ತದೆ.
ತನ್ನದಲ್ಲದ ತಪ್ಪಿಗೆ ಜನರ ಕುಹಕ ನೋಟ ಎದುರಿಸಿ ಬದುಕು ನಡೆಸಬೇಕಾದ್ದನ್ನು ಅರಿತು ಏನು ಮಾಡಲು ತೋಚದೇ ಇರುವಂತಹ ಸಂದರ್ಭದಲ್ಲಿ ಮತ್ತೊಬ್ಬ ಮಂಗಳಮುಖಿಯ ಜೊತೆಯಾಗಿ ಅವಳಿಂದ ತಾಯಿಯ ಪ್ರೀತಿಯನ್ನು ಹೊಂದಿ ಅಲ್ಲಿ ಅವಳ ಮರಣಾನಂತರ ಬೃಹತ್ ನಗರ ಬೆಂಗಳೂರು ತಲುಪಿ ಅಲ್ಲಿ ತನ್ನಂತಹವರಿಗಾಗಿ ಅವರು ನಡೆಸುವ ಭಿಕ್ಷಾಟನೆ , ವೇಶ್ಯಾವೃತ್ತಿ , ಜನರ ನಿಂದನೆ ಕಂಡು ಬೇಸರಗೊಂಡು ಅವರ ಜೊತೆ ದುಡಿದು ತಿನ್ನುವ ಅವಕಾಶವನ್ನು ಬಹಳ ಕಷ್ಟ ಪಟ್ಟು ಬದುಕು ಕಟ್ಟಿ ಕೊಳ್ಳುವ ಅವಳನ್ನು ಲೇಖಕಿ ಶೈಲಜಾ ಹಾಸನ್ ಅವರು ಮನೋಜ್ಞ ವಾಗಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಕೊನೆಯಲ್ಲಿ ತನ್ನ ಕುಟುಂಬದ ಸಹಕಾರದೊಂದಿಗೆ ತನ್ನಂತಹ ಮಂಗಳಮುಖಿಯರಿಗೆ ಬದುಕು ಕಟ್ಟಿ ಕೊಡುವ ರೀತಿ ನಿಜಕ್ಕೂ ಶ್ಲಾಘನೀಯ. ಮತ್ತು ಅನುಕರಣೀಯ.
ಮೊದಲಿನಿಂದಲೂ ಕೊನೆಯವರೆಗೂ ಎಲ್ಲೂ ನಿಲ್ಲದೆ ಓದಿಸಿಕೊಂಡು ಹೋಗುವ ಕಾದಂಬರಿ ಇದಾಗಿದೆ. ಪ್ರಸ್ತುತ ಸಮಾಜದಲ್ಲಿ ಇಂತಹ ಮಂಗಳ ಮುಖಿಯರಿಗೆ ದಾರಿ ದೀಪವಾಗಿ ಇಂತಹ ನಾಯಕಿಯರ ಅಗತ್ಯವಿದೆ. ಇದನ್ನು ಲೇಖಕಿ ಮನಗಂಡು ಮತ್ತಷ್ಟು ಮಂಗಳ ಮುಖಿಯರಿಗೆ ದಾರಿ ಕಲ್ಪಸಲು ಈ ಕಾದಂಬರಿ ರಚನೆ ಮಾಡಿರಬಹುದು ಎಂಬ ಕಲ್ಪನೆ ನನಗಿದೆ. ಹೊಸಬೆಳಗು ಕಾದಂಬರಿ ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾದ ದಿನದಿಂದಲೂ ಕಾಡಿದ ವಸ್ತು ವಿಷಯವಿದು. ಇಂದಿನ ದಿನಗಳಲ್ಲಿ ತೃತೀಯ ಲಿಂಗಿಗಳನ್ನು ಜನರು ನಡೆಸಿಕೊಳ್ಳುವ ಬಗ್ಗೆ ಬೇಸರ ಮೂಡಿಸುತ್ತದೆ. ಆದಷ್ಟು ಬೇಗ ಪುಸ್ತಕ ರೂಪದಲ್ಲಿ ಹೊರ ತಂದು ಓದುಗ ಅಭಿಮಾನಿಗಳಿಗೆ ತಲುಪಿಸುವ ವ್ಯವಸ್ಥೆ ಆಗಬೇಕು ಇಂತಹ ಕೃತಿಗಳು ಹೆಚ್ಚು ಹೆಚ್ಚು ಜನರಿಗೆ ತಲುಪಬೇಕು ಎಂಬುದು ನನ್ನ ಆಶಯ. ಆ ನಡೆಯಲ್ಲಿ ಲೇಖಕಿ ಗಮನ ಹರಿಸುವರು ಎಂಬ ಆಶಯದೊಂದಿಗೆ .. ಅಭಿನಂದನೆಗಳು ಲೇಖಕಿಯವರಿಗೆ.

ವಾಣಿಮಹೇಶ್
PH:7975353693
ಹಾಸನ
