ಸ್ಪೇನ್, ಅರ್ಜೆಂಟೀನಾ, ಯುರೋಪ್, ಮಧ್ಯಪ್ರಾಚ್ಯ ಸೇರಿದಂತೆ ಇತರೆ ಪ್ರದೇಶಗಳಿಗೂ ವಿಸ್ತರಿಸಿರುವ ಪಾಡೆಲ್, ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಗಳಲ್ಲಿ ಒಂದಾಗಿದೆ. ಏಷ್ಯನ್ ಗೇಮ್ಸ್ನಲ್ಲಿ ಇದರ ಸೇರ್ಪಡೆಯು ಕೇವಲ ಪದಕಗಳ ದೃಷ್ಟಿಯಿಂದ ಮಾತ್ರವಲ್ಲದೆ, ಏಷ್ಯಾದಾದ್ಯಂತ ಕ್ರೀಡೆಯನ್ನು ವೀಕ್ಷಿಸುವ ಮತ್ತು ಬೆಂಬಲಿಸುವ ರೀತಿಯಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ.
ವರ್ಲ್ಡ್ ಪಾಡೆಲ್ ಲೀಗ್ನ ಸಹ-ಸ್ಥಾಪಕ ಮಹೇಶ್ ಭೂಪತಿ ಅವರ ಪ್ರಕಾರ, “ಪದಕಗಳು ಕಥೆಯ ಒಂದು ಭಾಗ ಮಾತ್ರ. ಏಷ್ಯನ್ ಗೇಮ್ಸ್ನಂತಹ ವೇದಿಕೆಗಳಿಂದ ಪಾಡೆಲ್ ಕ್ರೀಡೆಗೆ ಸರ್ಕಾರದ ಗಮನ, ಉತ್ತಮ ಹೂಡಿಕೆ ಹಾಗೂ ಪೋಷಕರ ಬೆಂಬಲ ಸಿಗುತ್ತದೆ. ವಿಶ್ವದ ಶ್ರೇಷ್ಠ ಆಟಗಾರರನ್ನು ಭಾರತಕ್ಕೆ ಕರೆತರುವ ಕೆಲಸವನ್ನು ವರ್ಲ್ಡ್ ಪಾಡೆಲ್ ಲೀಗ್ ಮಾಡುತ್ತಿದ್ದು, ಏಷ್ಯನ್ ಗೇಮ್ಸ್ನ ಈ ಪಯಣ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ” ಎಂದಿದ್ದಾರೆ.
ಸ್ಪೇನ್ ಮತ್ತು ಅರ್ಜೆಂಟೀನಾದಂತಹ ದೇಶಗಳು ಬಲವಾದ ಪಾಡೆಲ್ ಸಂಸ್ಕೃತಿಯನ್ನು ನಿರ್ಮಿಸಲು ವರ್ಷಗಳನ್ನು ಕಳೆದಿದ್ದು, ವರ್ಲ್ಡ್ ಪಾಡೆಲ್ ಲೀಗ್ ಮೂಲಕ ಈ ದೇಶಗಳ ಪ್ರಮುಖ ಆಟಗಾರರನ್ನು ಭಾರತಕ್ಕೆ ಕರೆತರುವ ಅವಕಾಶ ನಮಗೆ ಸಿಕ್ಕಿದೆ. ಏಷ್ಯನ್ ಗೇಮ್ಸ್ ಈಗ ಏಷ್ಯಾದಾದ್ಯಂತದ ದೇಶಗಳಿಗೆ ಕ್ರೀಡೆಯಲ್ಲಿ ಹೂಡಿಕೆ ಮಾಡಲು, ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಮತ್ತು ಪ್ರತಿಭಾವಂತ ಆಟಗಾರರನ್ನು ಬೆಳೆಸಲು ಮತ್ತೊಂದು ಬಲವಾದ ಪ್ರೇರಣೆ ನೀಡುತ್ತದೆ ಎಂದಿದ್ದಾರೆ.
ಪಾಡೆಲ್ ಕ್ರೀಡೆ ಬೆಳೆಯುವುದನ್ನು ಮತ್ತು ಹೆಚ್ಚಿನ ಜನರು ಇದನ್ನು ಅಳವಡಿಸಿಕೊಳ್ಳುವುದನ್ನು ನೋಡುವುದೇ ಒಂದು ಖುಷಿ. ಏಷ್ಯಾದಂತಹ ಬೃಹತ್ ಮಾರುಕಟ್ಟೆಗೆ ಕಾಲಿಟ್ಟ ಪಾಡೆಲ್ ಕ್ರೀಡೆಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಗಲಿದೆ. ಏಷ್ಯನ್ ಗೇಮ್ಸ್ ಮೂಲಕ ಅನೇಕ ಹೊಸಬರು ಪಾಡೆಲ್ ಕ್ರೀಡೆಯನ್ನು ಪರಿಚಯಿಸಿಕೊಂಡು ಆಡಲು ಪ್ರಾರಂಭಿಸುತ್ತಾರೆ. ಪಾಡೆಲ್ಗೆ ಇದು ನಿಜಕ್ಕೂ ಅತ್ಯಂತ ಮಹತ್ವದ ಹೆಜ್ಜೆಯಾಗಿದ್ದು, ಹೊಸ ದೇಶಗಳು ಮತ್ತು ಅಥ್ಲೀಟ್ಗಳಿಗೆ ಕ್ರೀಡೆಯನ್ನು ತಲುಪಿಸಲು ಇದು ನೆರವಾಗಲಿದೆ ಎಂದಿದ್ದಾರೆ.
ವಿಶ್ವದ 10ನೇ ಶ್ರೇಯಾಂಕದ ಪಾಡೆಲ್ ಆಟಗಾರ ಕೋಕಿ ನೀಟೊ ಮಾತನಾಡಿ, “ಪಾಡೆಲ್ ಹಿಂದೆಂದೂ ಆಡಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ದೇಶಗಳಿಗೂ ಕ್ರಮೇಣ ಕಾಲಿಡುತ್ತಿರುವುದನ್ನು ನೋಡಿದರೆ, ಈ ಕ್ರೀಡೆ ಎಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಎಂಬುದು ನಮಗೆ ಅರಿವಾಗುತ್ತದೆ. ಈ ನಿಟ್ಟಿನಲ್ಲಿ, ಪಾಡೆಲ್ ಅನ್ನು ಹೆಚ್ಚಿನ ದೇಶಗಳಿಗೆ ತಲುಪಿಸಲು ವರ್ಲ್ಡ್ ಪಾಡೆಲ್ ಲೀಗ್ ಅತ್ಯುತ್ತಮ ಕೆಲಸ ಮಾಡುತ್ತಿದೆ” ಎಂದಿದ್ದಾರೆ.
ವಿಶ್ವದ 10ನೇ ಶ್ರೇಯಾಂಕದ ಪಾಡೆಲ್ ಆಟಗಾರ್ತಿ ಮಾರ್ತಾ ಒರ್ಟೆಗಾ ಮಾತನಾಡಿ, “ಪಾಡೆಲ್ಗೆ ಇದು ನಿಜಕ್ಕೂ ಅತ್ಯಂತ ಮಹತ್ವದ ಹೆಜ್ಜೆ. ಹೊಸ ದೇಶಗಳು ಮತ್ತು ಅಥ್ಲೀಟ್ಗಳಿಗೆ ಕ್ರೀಡೆಯನ್ನು ತಲುಪಿಸಲು ಇದು ನೆರವಾಗುವುದಲ್ಲದೆ, ಒಲಿಂಪಿಕ್ಸ್ ತಲುಪುವ ನಮ್ಮ ಗುರಿಯನ್ನು ಮತ್ತಷ್ಟು ಹತ್ತಿರ ಮಾಡುತ್ತದೆ” ಎಂದಿದ್ದಾರೆ.
ವರ್ಲ್ಡ್ ಪಾಡೆಲ್ ಲೀಗ್ ತನ್ನ ನಾಲ್ಕನೇ ಸೀಸನ್ಗಾಗಿ ಆಗಸ್ಟ್ 12 ರಿಂದ 16 ರವರೆಗೆ ಮುಂಬೈನ ಡಿಒಎಂಇ (DOME), ಎಸ್ವಿಪಿ ಸ್ಟೇಡಿಯಂಗೆ ಮರಳಲಿದ್ದು, ಐದು ದಿನಗಳ ರೋಮಾಂಚಕಾರಿ ಸ್ಪರ್ಧೆಗಾಗಿ ವಿಶ್ವದ ಪ್ರಮುಖ 36 ಅಂತಾರಾಷ್ಟ್ರೀಯ ಆಟಗಾರರನ್ನು ಒಟ್ಟುಗೂಡಿಸುತ್ತಿದೆ.
ಪಾಡೆಲ್ ತನ್ನ ಐತಿಹಾಸಿಕ ಏಷ್ಯನ್ ಗೇಮ್ಸ್ ಪದಾರ್ಪಣೆಗೆ ಸಜ್ಜಾಗುತ್ತಿರುವಂತೆಯೇ, ಭಾರತದಲ್ಲಿ ಕ್ರೀಡೆಯ ಹೆಜ್ಜೆಗುರುತನ್ನು ವಿಸ್ತರಿಸುವಲ್ಲಿ, ವಿಶ್ವದರ್ಜೆಯ ಸ್ಪರ್ಧೆಯನ್ನು ಪ್ರದರ್ಶಿಸುವಲ್ಲಿ, ಭವಿಷ್ಯದ ಪ್ರತಿಭೆಗಳನ್ನು ಪ್ರೇರೇಪಿಸುವಲ್ಲಿ ಮತ್ತು ಈ ಪ್ರದೇಶದಲ್ಲಿ ಕ್ರೀಡೆಯ ದೀರ್ಘಕಾಲೀನ ಬೆಳವಣಿಗೆಗೆ ಅಗತ್ಯವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಲೀಗ್ ಪ್ರಮುಖ ಪಾತ್ರ ವಹಿಸುತ್ತಿದೆ.
