ಕೊರಟಗೆರೆ :- ಬುಧವಾರ ಸಂಜೆ ಕೊರಟಗೆರೆ ತಾಲೂಕಿನ ವಿವಿಧ ಭಾಗಗಳಲ್ಲಿ ಸುರಿದ ಭಾರೀ ಗಾಳಿ ಸಹಿತ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ ಹಾಗೂ ಕೃಷಿ ನಷ್ಟ ಸಂಭವಿಸಿರುವ ಘಟನೆಗಳು ವರದಿಯಾಗಿವೆ.
ವಿಶೇಷವಾಗಿ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮಳೆರಾಯನ ಅಟ್ಟಹಾಸಕ್ಕೆ ರೈತ ಸಮುದಾಯ ತತ್ತರಿಸಿದ್ದು, ಸಾವಿರಾರು ಅಡಿಕೆ, ಬಾಳೆ ಹಾಗೂ ತೆಂಗಿನ ಮರಗಳು ನೆಲಕಚ್ಚಿವೆ. ಭಾರೀ ಗಾಳಿಯ ವೇಗಕ್ಕೆ ತಾಲೂಕಿನ ಹಲವು ಗ್ರಾಮಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಅನೇಕ ಕಡೆ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಹೊಳವನಹಳ್ಳಿ–ದುಗ್ಗೇನಹಳ್ಳಿ ಮಾರ್ಗ ಮಧ್ಯೆ ದೊಡ್ಡ ತೆಂಗಿನ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದು ತೂಗುತಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ವಿದ್ಯುತ್ ಕಂಬಗಳು ಸಂಪೂರ್ಣ ನೆಲಕ್ಕೆ ಬೀಳುವ ಪರಿಸ್ಥಿತಿ ಉಂಟಾದರೆ ಸಮೀಪದ ಮನೆಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ.
ಹೊಳವನಹಳ್ಳಿ–ಸೋಂಪುರ ರಸ್ತೆಯ ದೊಡ್ಡಮಠದ ಸಮೀಪ ಬೃಹತ್ ಮರ ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ಗ್ರಾಮಸ್ಥರು ಹಾಗೂ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಮರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗದೆ ಬೆಳಿಗ್ಗೆ ತೆರವುಗೊಳಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ತಾಲೂಕಿನ ಹಲವೆಡೆ ರೈತರು ಬೆಳೆದಿದ್ದ ಅಡಿಕೆ, ಬಾಳೆ ಹಾಗೂ ತೆಂಗಿನ ತೋಟಗಳು ಭಾರೀ ಗಾಳಿಗೆ ಧರೆಗೆ ಉರುಳಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆ ವ್ಯಕ್ತವಾಗಿದೆ. ಈಗಾಗಲೇ ಮಳೆ ಕೊರತೆ ಹಾಗೂ ಬೆಳೆ ಹಾನಿಯಿಂದ ಸಂಕಷ್ಟದಲ್ಲಿದ್ದ ರೈತರಿಗೆ ಈ ಅಕಾಲಿಕ ಗಾಳಿ ಮಳೆ ಮತ್ತೊಂದು ಹೊಡೆತ ನೀಡಿದಂತಾಗಿದೆ.
ಸ್ಥಳೀಯರು ತುರ್ತು ವಿದ್ಯುತ್ ದುರಸ್ತಿ ಹಾಗೂ ರಸ್ತೆ ಸಂಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
