ಬಸ್ನಲ್ಲಿ “ತುರ್ತು ನಿರ್ಗಮನ” ಎಂದು ಬರೆದಿರುವ ಸೀಟಿನಲ್ಲಿ ಸುಮಾರು ಐವತ್ತರ ಹರೆಯದವನಿರಬಹುದಾದ ಒಬ್ಬ ವ್ಯಕ್ತಿ ಮುಲುಗುತ್ತಾ, ಮುದುರಿಕೊಂಡು ಕುಳಿತಿದ್ದ. ಆತನ ಪಕ್ಕದಲ್ಲಿದ್ದ ಹೆಂಗಸು ಬಹುಶಃ ಆತನ ಹೆಂಡತಿಯೇ ಇರಬಹುದು.
ಅವರದೇ ಆದ ಮರಾಠಿ ಮಿಶ್ರಿತ ತೆಲುಗಿನಲ್ಲಿ ಎಡಬಿಡದೆ ವಟಗುಟ್ಟುತ್ತಾ ಯಾರಿಗೋ ಶಾಪ ಹಾಕುತ್ತಿದ್ದಳು. ಆಗಾಗ ಆ ಗಂಡಸು ಯಾರೋ ಅದೃಶ್ಯ ವ್ಯಕ್ತಿ ಸೂಜಿಯಿಂದ ಚುಚ್ಚುತ್ತಿರುವನೋ ಎಂಬಂತೆ “ಆ… ಊ… ಆಹಾ…” ಎಂದು ನೋವಿನಿಂದ ಮುಲುಗುತ್ತಿದ್ದ. ಮುಖವಂತೂ ಅನ್ನ ತಿಂದು ಮೂರು ದಿನಗಳಾದವನಂತೆ ಬಾಡಿಹೋಗಿತ್ತು.
ಮೂರು ಜನ ಕೂರುವಂತಿದ್ದ ಆ ಸೀಟಿನ ಮೂರನೇ ಪ್ರಯಾಣಿಕಳು ಶಿಶುವಿಹಾರದ ಆಯಾ ಕಸ್ತೂರಮ್ಮ. ಪಕ್ಕದ ಹೆಂಗಸಿನ ಕೊನೆಮೊದಲಿಲ್ಲದ ಲೊಳಲಾಟವನ್ನು ನೋಡಿ,
“ನಿನ್ ಬಾಯಿಗೆ ಯಾವಳೇ ಕೈ ಹಾಕಿದ್ದು? ನಾನೂ ಅಲ್ಲಿಂದಲೇ ನೋಡ್ತಿದ್ದೀನಿ. ಪುರುಸೋತ್ತಿಲ್ಲದೆ ಪಟಪಟನೆ ಮಾತನಾಡ್ತಿದೀಯಲ್ಲ!” ಎಂದಳು.
ಅಷ್ಟರಲ್ಲಿ ಕಿಟಕಿಯ ಪಕ್ಕದಲ್ಲಿ ನೋವಿನಿಂದ ನರಳುತ್ತಾ ಕುಳಿತಿದ್ದ ಆ ವ್ಯಕ್ತಿ, ಪಕ್ಕದಲ್ಲಿದ್ದ ತನ್ನ ಹೆಂಡತಿಯ ಮೇಲೆ ಇದ್ದಕ್ಕಿದ್ದಂತೆ ಹರಿಹಾಯ್ದ.
“ಏಯ್! ಇನ್ನೊಂದು ಮಾತು ಆಡಿದ್ರೂ ನಿನ್ನನ್ನು ಇಲ್ಲೇ ಎಲ್ಲರ ಮುಂದೆ ಸೀರೆ ಬಿಚ್ಚಿ ಬಸ್ಸಾಚೆಗೆ ನೂಕಿಬಿಡ್ತೀನಿ. ಎಲ್ಲವೂ ನಿನ್ನಿಂದಲೇ ಆಗಿದ್ದು. ಆ ಮನುಷ್ಯ ಎಂಥವನು ಅಂತ ಗೊತ್ತಿದ್ದರೂ ನನ್ನನ್ನು ಪೊಲೀಸರಿಗೆ ಸಿಕ್ಕೋ ಹಂಗೆ ಮಾಡಿಬಿಟ್ಟೆಯಲ್ಲ! ಅಮ್ಮಾರೇ… ಅಯ್ಯೋ… ಏನು ಹೇಳಲಿ ನನ್ನ ಕಥೆ! ಈ ಹೆಂಗಸಿನ ದೆಸೆಯಿಂದ ನನ್ನ ಪ್ರಾಣವೇ ಹೋಗ್ತಿತ್ತು. ನೋಡಿ, ಹೇಗೆ ಕೂತಿದ್ದಾಳೆ ಮೂದೇವಿ!”
ಕಸ್ತೂರಮ್ಮನಿಗೆ ಕೆಲ ಬೈಗುಳಗಳನ್ನು ಬಿಟ್ಟರೆ ಉಳಿದ ಮಾತುಗಳ ತಲೆಬುಡವೇ ಅರ್ಥವಾಗಲಿಲ್ಲ. ಪಕ್ಕದ ಹೆಂಗಸನ್ನು,
“ಏನೇ? ಏನ್ ಸಮಾಚಾರ?” ಎಂದು ಕೇಳಿದಳು. ಕಸ್ತೂರಮ್ಮನಿಗೂ ಊರು ಸೇರುವವರೆಗೂ ಮಾತನಾಡಲು ಒಂದು ವಿಷಯ ಬೇಕಾಗಿತ್ತು.

“ನಂಗೇನೂ ಗೊತ್ತಿಲ್ಲ. ಎಲ್ಲವೂ ಈ ಗಂಡ್ಸನ್ನೇ ಕೇಳಿ, ಸೂರನ್ನ!” ಎಂದು ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಸಿಡುಕಿನಿಂದ ಕೊರಳು ಕೊಂಕಿಸಿ, ಬಸ್ಸಿನ ಕಿಟಕಿಯಾಚೆ ನೋಡುತ್ತಾ ಕುಳಿತಳು.ಆ ಗಂಡಸು ಹೇಳಿದ ವೃತ್ತಾಂತದ ಸಾರಾಂಶ ಹೀಗಿತ್ತು.
ಕಾಫಿ ಹಣ್ಣು ಕೊಯ್ಲಿನ ಸಮಯದಲ್ಲಿ ಇಲ್ಲಿನ ಕೂಲಿಯಾಳುಗಳು ಸಾಕಾಗದೇ ದಾವಣಗೆರೆ, ಬಳ್ಳಾರಿ ಭಾಗಗಳಿಂದ ಸಾವಿರಾರು ಕಾರ್ಮಿಕರು ಮಲೆನಾಡಿಗೆ ಬರುತ್ತಾರೆ. ಊಟಕ್ಕೆ ಬೇಕಾದ ಜೋಳ ಮತ್ತಿತರ ಧಾನ್ಯಗಳನ್ನು ಅಲ್ಲಿಂದಲೇ ಹೊತ್ತುತರುವ ಈ ಕಾರ್ಮಿಕರನ್ನು ಕರೆತರಲು ಒಬ್ಬ ಮೇಸ್ತ್ರಿ ಇರುತ್ತಾನೆ. ಆ ಮೇಸ್ತ್ರಿಯೊಂದಿಗೆ ಕಾಫಿ ಬೆಳೆಗಾರರು ವ್ಯವಹಾರ ಕುದುರಿಸಿ ದಿನಗೂಲಿ ನಿಗದಿಪಡಿಸುತ್ತಾರೆ.
“ನನಗಿಷ್ಟು ಕೆಲಸಗಾರರು ಇಷ್ಟು ದಿನ ಬೇಕು. ಪ್ರತಿ ಕೆಲಸಗಾರನಿಗೆ ಮೇಸ್ತ್ರಿಗೆ ಇಷ್ಟು ಕಮಿಷನ್. ಕಾರ್ಮಿಕರ ಕುಟುಂಬಕ್ಕೆ ಈ ನಡುವೆ ತರಕಾರಿ, ಕೋಳಿ, ಶರಾಬು, ಮೀನು ಖರೀದಿಗೆ ವಾರಕ್ಕೊಮ್ಮೆ ಇಷ್ಟು ಹಣ ನೀಡಬೇಕು.”
ಸಂಬಳದ ಹಣ ಪೂರ್ಣವಾಗಿ ಮೇಸ್ತ್ರಿಯ ಕೈಗೆ ತಲುಪುತ್ತದೆ. ಆತ ಅದರಲ್ಲಿ ವಾಹನದ ಖರ್ಚು, ದವಸಧಾನ್ಯ, ಕಮಿಷನ್ ಮುಂತಾದ ವೆಚ್ಚಗಳನ್ನು ಕಡಿತಗೊಳಿಸಿ, ಊರಿಗೆ ಹಿಂದಿರುಗಿದ ಬಳಿಕ ಉಳಿದ ಹಣವನ್ನು ಕಾರ್ಮಿಕರಿಗೆ ಅವರವರ ಕೆಲಸಕ್ಕನುಗುಣವಾಗಿ ಹಂಚುತ್ತಾನೆ.
ಹೀಗೆ ಕೂಲಿಯ ಕೆಲಸದ ಅನ್ವೇಷಣೆಯಲ್ಲಿ ದಾವಣಗೆರೆಯಿಂದ ಮೂಡಿಗೆರೆಗೆ ಬಂದ ಅನೇಕ ಕುಟುಂಬಗಳಲ್ಲಿ ಈ ಕುಟುಂಬವೂ ಒಂದಾಗಿತ್ತು.
ಕೆಲಸಕ್ಕೆ ಬರುವ ಕುಟುಂಬಗಳನ್ನು ತೋಟದ ಮಾಲೀಕರು ತೋಟದಲ್ಲಿರುವ ‘ಲೈನ್’ ಎಂಬ ವಸತಿಗೃಹಗಳಲ್ಲಿ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಇರಿಸಿಕೊಳ್ಳುತ್ತಾರೆ. ತಮ್ಮ ತೋಟದ ಕಾಫಿ ಕೊಯ್ಲು, ಜಮಾಕ್ಷನ್, ಹೊಕ್ಕು, ಅಗತೆ ಮೊದಲಾದ ಕೆಲಸಗಳು ಮುಗಿಯುವವರೆಗೆ ಅವರನ್ನು ಅಲ್ಲೇ ಇರಿಸಿಕೊಂಡು, ಬಳಿಕ ಮೇಸ್ತ್ರಿಯೊಂದಿಗೆ ಲೆಕ್ಕಾಚಾರ ಮುಗಿಸಿ ಊರಿಗೆ ಕಳುಹಿಸುವುದು ವಾಡಿಕೆ.
ಈ ಬಸ್ನಲ್ಲಿ ನೋವಿನಿಂದ ಮುಲುಗುತ್ತಿದ್ದ ಆ ಕಾರ್ಮಿಕನ ಹೆಸರು ಬಸವರಾಜು, ಎಲ್ಲರೂ ಬಸ್ರಾಜ ಎಂದೇ ಕರೆಯುತ್ತಿದ್ದರು. ಅವನ ಹೆಂಡತಿ ಪಾರಿ ಅಥವಾ ಪಾರ್ವತಿ. ಸ್ನಾನ ಮಾಡಿ, ಒಳ್ಳೆಯ ಬಟ್ಟೆ ತೊಟ್ಟರೆ ಕಾರಿನಲ್ಲಿ ಓಡಾಡುವ ಮಲೆನಾಡಿನ ಪ್ಲಾಂಟರ್ಗಳ ಹೆಂಗಸರಿಗೇ ರೂಪ, ಮೈಕಟ್ಟು, ವೈಯ್ಯಾರದಲ್ಲಿ ಯಾವ ರೀತಿಯಲ್ಲೂ ಕಡಿಮೆಯಿರಲಿಲ್ಲ.
ಅದಕ್ಕೆ ಸರಿಯಾಗಿ ಬಸ್ರಾಜನ ಹೆಂಡತಿ ನಮ್ಮೂರಿನ ಗೋಪಾಲನ ಕಣ್ಣಿಗೆ ಬೀಳಬೇಕೇ? ಈ ಗೋಪಾಲ ಕೆಲಸಗಾರ್ತಿಯರ ಆಳುತನದ ಮೇಲೆ ಕೆಲಸ-ಕೂಲಿ ನಿಗದಿ ಮಾಡಿ ಪ್ಲಾಂಟರಿಕೆ ನಡೆಸುತ್ತಿದ್ದವನು. ಮೊದಲೇ ತಿರುತಿರುಗಿ ನೋಡುವಂತಿದ್ದ ಪಾರಿ, ಶೋಕಿ ಮಾಡುವ ಖಯಾಲಿಯವಳಾಗಿದ್ದರಿಂದ ನೆಪ ಮಾತ್ರಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು.
ಸೊಗಸುಗಾರ ಗೋಪಾಲ ತನ್ನ ಯೆಜ್ಡಿ ಮೋಟಾರ್ಬೈಕ್ನಲ್ಲಿ ಹಳೆ ಡವ್ವುಗಳನ್ನು ಹುಡುಕುತ್ತಾ ಪೇಟೆ-ತೋಟವೆಲ್ಲ ಸುತ್ತಾಡುತ್ತಿದ್ದವನು. ಈಗೀಗ ಕೂಲಿಯಾಳುಗಳ ಲೈನ್ಗಳ ಬಳಿ ಗುಡುಗುಡು… ಭರ್ರ್… ಎಂದು ವಿನಾಕಾರಣ ಸುತ್ತಾಡತೊಡಗಿದ.
ಅಮಾಯಕ ಬಸ್ರಾಜ ಮಾತ್ರ ತನ್ನ ಮೂರು ಮಕ್ಕಳೊಂದಿಗೆ ಮುದ್ದೆ, ರೊಟ್ಟಿ, ಹುರುಳಿಕಟ್ಟು ಸಿಕ್ಕಿದ್ದನ್ನು ತಿಂದು, ಮಧ್ಯಾಹ್ನ ಎರಡು ಗಂಟೆಯವರೆಗೆ ಕಾಫಿ ಕೊಯ್ದು ಲೈನ್ಗೆ ಬಂದು ಉಸ್ಸೆಂದು ಮಲಗುತ್ತಿದ್ದ. ಸಂಜೆ ಐದು ಗಂಟೆಗೆ ಎದ್ದು ಜಾರಪ್ಪನ ಕಳ್ಳಭಟ್ಟಿ ಸಾರಾಯಿಗೆ ಮುಗಿಬೀಳುತ್ತಿದ್ದ.

