ಹಾಸನ, ಮೇ 21: ಸನಾತನ ಧರ್ಮ ಹಾಗೂ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳು ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತವೆ ಎಂದು ವಿ. ಅಕ್ಷತಾ ರುದ್ರಪಟ್ಟಣ ಹೇಳಿದರು.
ರಾಮನಾಥಪುರ ಹೋಬಳಿಯ ರುದ್ರಪಟ್ಟಣದ ಶ್ರೀರಾಮ ಮಂದಿರ ಸಭಾಂಗಣದಲ್ಲಿ ನಡೆದ ಎರಡನೇ ದಿನದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಖ್ಯಾತ ಗಾಯಕ ವಿ. ಹೃಷಿಕೇಶ್ ಭಾರಧ್ವಜ್ ಅವರ ಗಾಯನ ಕಾರ್ಯಕ್ರಮದ ಬಳಿಕ ಸಂಗೀತ ಅಲಾಪನೆ ಹಾಗೂ ಅದರ ವೈಶಿಷ್ಟ್ಯದ ಕುರಿತು ಸವಿಸ್ತಾರವಾಗಿ ವಿವರಿಸಿದ ಅವರು, ದೇವರು, ಧರ್ಮ, ತಂದೆ-ತಾಯಿ, ಗುರುಹಿರಿಯರ ಬಗ್ಗೆ ಪೂಜ್ಯ ಭಾವನೆ ಬೆಳೆಸಿಕೊಂಡು ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಗೀತವು ಕೇವಲ ಮನರಂಜನೆ ಮಾತ್ರವಲ್ಲದೆ, ಆತ್ಮಶಾಂತಿ ಹಾಗೂ ಸಂಸ್ಕೃತಿಯ ಅರಿವು ಮೂಡಿಸುವ ಶಕ್ತಿ ಹೊಂದಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿದ್ವಾನ್ ಅರ್.ಕೆ. ಪದ್ಮನಾಭ್, ವಿ. ಭಾಸ್ಕರ್ ಅವದಾನಿ, ಅರ್.ಸಿ. ರಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
