ಶ್ಲೋಕ – 50
ಸಂಜಯ ಉವಾಚ ।
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ ।
ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ ॥೫೦॥
ಸಂಜಯ ಉವಾಚ- ಸಂಜಯ ಹೇಳಿದನು :
ಇತಿ ಅರ್ಜುನಮ್ ವಾಸುದೇವಃ ತಥಾ ಉಕ್ತ್ವಾ ಸ್ವಕಮ್ ರೂಪಮ್ ದರ್ಶಯಾಮ್ ಆಸ ಭೂಯಃ ।
ಆಶ್ವಾಸಯಾಮ್ ಆಸ ಚ ಭೀತಮ್ ಏನಮ್ ಭೂತ್ವಾ ಪುನಃ ಸೌಮ್ಯವಪುಃ ಮಹಾತ್ಮಾ –ವಾಸುದೇವ ಹೀಗೆ ನುಡಿದು ಮರಳಿ ಅರ್ಜುನನಿಗೆ ತನ್ನ ಕೃಷ್ಣ ರೂಪವನ್ನೇ ತೋರಿದ. ಮಹಾತ್ಮನಾದ ಕೃಷ್ಣ ಹೀಗೆ ಮರಳಿ ಸೌಮ್ಯರೂಪ ತಾಳಿ ಅಂಜಿದ್ದ ಅರ್ಜುನನನ್ನು ಸಂತೈಸಿದ.
ಈ ಶ್ಲೋಕದಲ್ಲಿ ಸಂಜಯ ಭಗವಂತನನ್ನು ವಾಸುದೇವ ಎಂದು ಸಂಬೋಧಿಸಿದ್ದಾನೆ. ಭಗವಂತನ ಈ ನಾಮಕ್ಕೆ ಅನೇಕ ಅರ್ಥಗಳಿವೆ. ವಾಸು+ದೇವ-ವಾಸುದೇವ. ಭಗವಂತ ವಾಸು, ಅಂದರೆ ತನ್ನನ್ನು ತಾನು ಮುಚ್ಚಿಕೊಂಡವನು. ಯಾವಾಗ ನಾವು ಸಂಸಾರ ಬಂಧನದ ಹದಿನೈದು ಬೇಲಿಗಳನ್ನು ದಾಟಿ, ಸಮಾದಿ ಸ್ಥಿತಿಯಿಂದ ಆಳಕ್ಕಿಳಿದು, ಹದಿನಾರನೇ ಜೀವಸ್ವರೂಪವನ್ನು ಕಾಣುತ್ತೆವೋ, ಆಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಮುಚ್ಚಿಕೊಂಡ ಭಗವಂತ ದೇವನಾಗಿ ತೆರೆದುಕೊಳ್ಳುತ್ತಾನೆ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮನ್ನು ಕಾಣಬೇಕು. ನಮ್ಮ ಅರಿವೇ ನಮಗಿಲ್ಲದೆ ಭಗವಂತನನ್ನು ಕಾಣುವುದು ಅಸಾಧ್ಯ. ನಾವು ನಮ್ಮ ಜೀವಸ್ವರೂಪವನ್ನು ಕಂಡಾಗ, ಅದರೊಳಗಿನಿಂದ ಸಾಕ್ಷಾತ್ಕಾರವಾಗುವ ಭಗವಂತ ದೇವಃ. ನಾವು ನಮ್ಮ ಪಂಚಕೋಶಗಳ(ಅನ್ನಮಯ ಕೋಶ, ಪ್ರಾಣಮಯ ಕೋಶ , ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗೂ ಆನಂದಮಯ ಕೋಶ) ಪರದೆಯಲ್ಲಿದ್ದಾಗ ವಾಸುವಾಗಿ; ಪರದೆಯಿಂದಾಚೆಗೆ ಬಂದು ಜೀವ ಸ್ವರೂಪವನ್ನು ಕಂಡಾಗ ದೇವನಾಗಿ ದರ್ಶನ ಕೊಡುವ ಭಗವಂತ ವಾಸುದೇವಃ.
