ಶ್ಲೋಕ – 51
ಅರ್ಜುನ ಉವಾಚ ।
ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ ।
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ ॥೫೧॥
ಅರ್ಜುನ ಉವಾಚ-ಅರ್ಜುನ ಹೇಳಿದನು :
ದೃಷ್ಟ್ವಾ ಇದಮ್ ಮಾನುಷಮ್ ರೂಪಮ್ ತವ ಸೌಮ್ಯಮ್ ಜನಾರ್ದನ ।
ಇದಾನೀಮ್ ಅಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಮ್ ಗತಃ –ಜನಾರ್ದನ, ಮನುಷ್ಯಾಕಾರದ ನಿನ್ನ ಈ ಸೌಮ್ಯರೂಪವನ್ನು ಕಂಡು ಜೀವ ಬಂತು. ಈಗ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಿದ್ದೇನೆ.
ಇಲ್ಲಿ ಅರ್ಜುನ ಭಗವಂತನನ್ನು ಜನಾರ್ದನ ಎಂದು ಸಂಬೋಧಿಸಿದ್ದಾನೆ. ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಅಂದರೆ ಕೊನೆಗೊಳಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ. ‘ಜನ’ ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ. ಜನ ಅಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು ಅಂದರೆ ಮುಕ್ತಿಪ್ರದಾಯಕ. “ದುರ್ಜನರ ಸಂಹಾರಕ್ಕೆಂದು ನಿಂತಿರುವ ನಿನ್ನ ಆ ರೂಪವನ್ನು ಕಂಡು ನಾನು ಭಯಗೊಂಡಿದ್ದೆ. ಭಕ್ತರ ಕರೆಗೆ ಓಗೊಟ್ಟು, ತನ್ನ ಭಕ್ತರಿಗೆ ಮೋಕ್ಷವನ್ನು ಕರುಣಿಸುವ ನಿನ್ನ ಈ ಸೌಮ್ಯ ರೂಪವನ್ನು ಕಂಡು ನಾನು ಚೇತರಿಸಿಕೊಂಡೆ”- ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.
